ಸಂಗಮದತ್ತ ಸಾಗುತ್ತಿರುವ ಸಾಧುಗಳು
ಲಖನೌ: ಪ್ರಯಾಗ್‌ರಾಜ್‌ನ ಗಂಗಾನದಿ ತಟದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳವು ಇಂದಿನಿಂದ (ಸೋಮವಾರ) ಆರಂಭಗೊಂಡಿದ್ದು, ಸಾಧು–ಸಂತರು ಸೇರಿ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ.
ಫೆಬ್ರುವರಿ 26ರವರೆಗೆ 45 ದಿನ ನಡೆಯುವ ಮೇಳದಲ್ಲಿ ದೇಶ–ವಿದೇಶಗಳಿಂದ ಭಕ್ತರು ಭಾಗವಹಿಸಲಿದ್ದಾರೆ. ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಆಸುಪಾಸು 10 ಸಾವಿರ ಎಕರೆಯಷ್ಟು ವಿಸ್ತೀರ್ಣದಲ್ಲಿ ಸಿದ್ಧತೆ ಕೈಗೊಳ್ಳಲಾಗಿದ್ದು, 25 ವಲಯಗಳನ್ನಾಗಿ ವಿಂಗಡಿಸಲಾಗಿದೆ.
ಈ ಬಾರಿ ನಡೆಯುತ್ತಿರುವುದು 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ. ಹಿಂದಿನ ಬಾರಿ ಕುಂಭ ಮೇಳದಲ್ಲಿ 24 ಕೋಟಿ ಮಂದಿ ಭಾಗವಹಿಸಿದ್ದರು. ಈ ಬಾರಿ ಮಹಾಕುಂಭ ಮೇಳದಲ್ಲಿ 45 ಕೋಟಿ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಬಾರಿ 7,900 ಎಕರೆ ಜಾಗದಲ್ಲಿ ಕುಂಭ ಮೇಳ ಆಯೋಜಿಸಲಾಗಿತ್ತು. ಈ ಬಾರಿ ಶೇ 25ರಷ್ಟು ಹೆಚ್ಚು ಸ್ಥಳವನ್ನು ಮಹಾಕುಂಭ ಮೇಳಕ್ಕಾಗಿ ಬಳಸಿಕೊಳ್ಳಲಾಗಿದೆ. ಕಳೆದ ಬಾರಿ ₹3,500 ಕೋಟಿ ವೆಚ್ಚದಲ್ಲಿ ಕುಂಭಮೇಳ ನಡೆದಿತ್ತು; ಈ ಬಾರಿ ಮಹಾಕುಂಭ ಮೇಳದ ವೆಚ್ಚ ಅದರ ಎರಡರಷ್ಟಿದೆ. 2019ರಲ್ಲಿ ನಡೆದಿದ್ದ ಕುಂಭ ಮೇಳದ ಘಾಟ್‌ಗಳ ಉದ್ದ 8 ಕಿ.ಮೀ.ಇತ್ತು. ಈ ಬಾರಿ ಅದನ್ನು 12 ಕಿ.ಮೀ.ಗೆ ಹೆಚ್ಚಿಸಲಾಗಿದೆ. ರೈಲು, ಹೆದ್ದಾರಿ ಪ್ರಯಾಣದ ವ್ಯವಸ್ಥೆಯಲ್ಲೂ ಇದೇ ರೀತಿಯ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದು ಗಂಗಾ, ಯಮುನಾ ನದಿಗಳ ಸಂಗಮ ಸ್ಥಳ. ಗುಪ್ತಗಾಮಿನಿಯಾದ ಸರಸ್ವತಿ ನದಿಯೂ ಪ್ರಯಾಗ್‌ರಾಜ್‌ನಲ್ಲಿ ಸಂಗಮಿಸುತ್ತಾಳೆ ಎಂಬ ನಂಬಿಕೆ ಇದೆ. ಪುಷ್ಯ ಪೂರ್ಣಿಮೆಯ ಪವಿತ್ರ ದಿನದಂದು ಶಾಹೀ (ಪವಿತ್ರ) ಸ್ನಾನ ಮಾಡುವುದು ಭಕ್ತಾದಿಗಳ ಬಯಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.