ADVERTISEMENT

ನೂಪುರ್ ಶರ್ಮಾ ಪರ ಪೋಸ್ಟ್: ಮಹಾರಾಷ್ಟ್ರದ ಅಮರಾವತಿಯಲ್ಲಿ ಔಷಧ ವ್ಯಾಪಾರಿಯ ಹತ್ಯೆ

ಪಿಟಿಐ
Published 2 ಜುಲೈ 2022, 10:16 IST
Last Updated 2 ಜುಲೈ 2022, 10:16 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ನಾಗ್ಪುರ: ಮಹಾರಾಷ್ಟ್ರದ ಅಮರಾವತಿಯಲ್ಲಿ ಔಷಧ ವ್ಯಾಪಾರಿಯೊಬ್ಬರನ್ನು ಹತ್ಯೆ ಮಾಡಲಾಗಿದ್ದು, ಇದಕ್ಕೆ ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪರ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿರುವುದು ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಜೂನ್ 21ರಂದು ಔಷಧ ವ್ಯಾಪಾರಿ ಉಮೇಶ್ ಪ್ರಹ್ಲಾದ್ ರಾವ್ ಕೊಲ್ಹೆ (54) ಎಂಬುವವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೂಪುರ್ ಪರ ಸಂದೇಶ ಪ್ರಕಟಿಸಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೇಲರ್ಕನ್ಹಯ್ಯ ಲಾಲ್ ಎಂಬುವವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ವಿಚಾರ ದೇಶದಾದ್ಯಂತ ಪ್ರತಿಭಟನೆಗೆ ಗುರಿಯಾಗಿರುವ ಸಂದರ್ಭದಲ್ಲೇ ಮಹಾರಾಷ್ಟ್ರದ ಹತ್ಯೆ ಪ್ರಕರಣವೂ ಸುದ್ದಿಯಾಗಿದೆ.

‘ಔಷಧ ವ್ಯಾಪಾರಿಯ ಹತ್ಯೆಗೆ ಸಂಬಂಧಿಸಿ ಐವರನ್ನು ಬಂಧಿಸಿದ್ದೇವೆ. ಪ್ರಮುಖ ಆರೋಪಿ ಇರ್ಫಾನ್ ಖಾನ್‌ಗಾಗಿ (32) ಶೋಧ ಕಾರ್ಯ ಮುಂದುವರಿದಿದೆ’ ಎಂದು ಅಮರಾವತಿ ಪೊಲೀಸ್ ಆಯುಕ್ತೆ ಡಾ. ಆರತಿ ಸಿಂಗ್ ಹೇಳಿದ್ದಾರೆ.

ಉಮೇಶ್ ಪ್ರಹ್ಲಾದ್ ರಾವ್ ಕೊಲ್ಹೆ ಅಮರಾವತಿಯಲ್ಲಿ ಮೆಡಿಕಲ್ ಸ್ಟೋರ್‌ ನಡೆಸುತ್ತಿದ್ದರು. ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವೊಂದನ್ನು ಶೇರ್ ಮಾಡಿದ್ದರು. ಕೆಲವು ಮುಸ್ಲಿಮರು ಹಾಗೂ ತಮ್ಮ ಗ್ರಾಹಕರು ಸದಸ್ಯರಾಗಿರುವ ಗ್ರೂಪ್‌ಗಳಲ್ಲಿ ಕೂಡ ಅವರು ಸಂದೇಶವನ್ನು ಹಂಚಿಕೊಂಡಿದ್ದರು’ ಎಂದು ಕೊತ್ವಾಲಿ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಬಳಿಕ ಇರ್ಫಾನ್ ಖಾನ್ ಕೊಲೆಗೆ ಸಂಚು ಹೂಡಿದ್ದ. ಐವರಿಗೆ ಕೊಲ್ಹೆ ಹತ್ಯೆಗೆ ಸುಪಾರಿ ನೀಡಿದ್ದು, ಪರಾರಿಯಾಗಲು ಕಾರಿನ ವ್ಯವಸ್ಥೆ ಮಾಡುವುದಾಗಿ ಹೇಳಿದ್ದ. ಜೂನ್ 21ರ ರಾತ್ರಿ 10ರಿಂದ 10.30 ಸುಮಾರಿಗೆ ಕೊಲ್ಹೆ ಅವರು ಮೆಡಿಕಲ್‌ನಿಂದ ಮನೆಗೆ ತೆರಳುತ್ತಿದ್ದಾಗ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಮತ್ತೊಂದು ವಾಹನದಲ್ಲಿ ಅವರ ಪತ್ನಿ ವೈಷ್ಣವಿ ಹಾಗೂ ಮಗ ಸಂಕೇತ್ ಸಹ ಇದ್ದರು. ಮಗ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು’ ಎಂದು ಅಧಿಕಾರಿ ತಿಳಿಸಿದ್ದಾರೆ.

ಕೊಲ್ಹೆ ಅವರ ಮಗ ಸಂಕೇತ್ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.