ಮುಂಬೈ: ದೇವೇಂದ್ರ ಫಡಣವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆ ಡಿಸೆಂಬರ್ 11 ಅಥವಾ 12ರಂದು ನಡೆಯಲಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
ಏಕನಾಥ ಶಿಂದೆ ನಾಯಕತ್ವದ ಹಿಂದಿನ ಸರ್ಕಾರದಲ್ಲಿ ಇದ್ದಂತೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯು ಹಣಕಾಸು ಖಾತೆ ಮತ್ತು ಬಿಜೆಪಿಯು ಗೃಹ ಖಾತೆಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಸಾಧ್ಯತೆಗಳಿವೆ.
ಶಿಂದೆ ನೇತೃತ್ವದ ಶಿವಸೇನಾ, ನಗರಾಭಿವೃದ್ಧಿ ಖಾತೆಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಜತೆಯಲ್ಲಿ ಕಂದಾಯ ಖಾತೆಯನ್ನೂ ಪಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಮಹಾರಾಷ್ಟ್ರ ಸಂಪುಟವು ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 43 ಸಚಿವರನ್ನು ಹೊಂದಬಹುದು.
‘ಮಹಾಯುತಿ’ ಮೈತ್ರಿಕೂಟದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಬಿಜೆಪಿಯು 21–22 ಖಾತೆಗಳನ್ನು ಪಡೆಯಬಹುದು. ಶಿವಸೇನಾಗೆ 11ರಿಂದ 12 ಹಾಗೂ ಎನ್‌ಸಿಪಿಗೆ 9ರಿಂದ 10 ಖಾತೆಗಳು ಸಿಗಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಮಾಣ ವಚನ ಸ್ವೀಕರಿಸುವ ಸಚಿವರ ಒಟ್ಟು ಸಂಖ್ಯೆ ಎಷ್ಟು ಎಂಬುದು ಇನ್ನೆರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.
ಶನಿವಾರ ಆರಂಭವಾಗಲಿರುವ ವಿಧಾನಸಭೆಯ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಹಂಗಾಮಿ ಸ್ಪೀಕರ್ ಕಾಳಿದಾಸ್ ಕೊಲಂಬ್ಕರ್ ಅವರು ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಸ್ಪೀಕರ್ ಚುನಾವಣೆ ಡಿಸೆಂಬರ್ 9ರಂದು ನಡೆಯಲಿದ್ದು, ವಿಧಾನಸಭೆಯ ಚಳಿಗಾಲದ ಅಧಿವೇಶನ ಡಿಸೆಂಬರ್ 16ರಂದು ನಾಗ್ಪುರದಲ್ಲಿ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.