ಮಹಾರಾಷ್ಟ್ರ ವಿಧಾನಸಭೆ
ಮುಂಬೈ: ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಾಳೆ (ಡಿ.15) ನಡೆಯಲಿದೆ. ಸಚಿವರ ಪ್ರಮಾಣವಚನ ಸಮಾರಂಭ ನಾಗ್ಪುರದಲ್ಲಿ ನಡೆಯಲಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.
ಸುಮಾರು 40 ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯನ್ನು ಒಳಗೊಂಡಂತೆ ಗರಿಷ್ಠ 43 ಸಚಿವರ ಸಂಪುಟ ರಚನೆ ಮಾಡಲು ಅವಕಾಶವಿದೆ. ಬಿಜೆಪಿ 20-21, ಶಿವಸೇನೆ (ಶಿಂಧೆ) 11-12, ಎನ್‌ಸಿಪಿ (ಅಜಿತ್) 9-10 ಸಚಿವ ಸ್ಥಾನಗಳು ದೊರೆಯುವ ಸಾಧ್ಯತೆ ಇದೆ ಎಂದು ಬಿಜೆಪಿಯ ಅಧಿಕೃತ ಮೂಲಗಳು ತಿಳಿಸಿವೆ.
ಕಳೆದ ಡಿಸೆಂಬರ್ 5ರಂದು ಮುಂಬೈನಲ್ಲಿ ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿಯಾಗಿ, ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ (ಬಿಜೆಪಿ,ಶಿವಸೇನೆ,ಎನ್‌ಸಿಪಿ) ಮೈತ್ರಿಕೂಟ 288 ಸ್ಥಾನಗಳ ಪೈಕಿ 230ರಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತು. ಬಿಜೆಪಿ 132, ಶಿವಸೇನೆ (ಶಿಂಧೆ) 57 ಮತ್ತು ಎನ್‌ಸಿಪಿ(ಅಜಿತ್) 41 ಸ್ಥಾನಗಳನ್ನು ಪಡೆದಿವೆ.
ಡಿಸೆಂಬರ್ 16ರಂದು ಮಹಾರಾಷ್ಟ್ರದ ಎರಡನೇ ರಾಜಧಾನಿ ನಾಗ್ಪುರದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನ ಒಂದು ವಾರ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.