ADVERTISEMENT

ಲಾಕ್‌ಡೌನ್‌ ನಾಕ್‌ಡೌನ್‌ಗಳು ಬೇಡ, ಕೋವಿಡ್ ಮಾರ್ಗಸೂಚಿ ಪಾಲಿಸೋಣ: ಉದ್ಧವ್ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 14:56 IST
Last Updated 6 ಜೂನ್ 2021, 14:56 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: ಲಾಕ್‌ಡೌನ್‌ ಮತ್ತು ನಾಕ್‌ಡೌನ್‌ಗಳನ್ನು ನಾನು ಬಯಸುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಆದರೆ, ಕೋವಿಡ್ ಮಾರ್ಗಸೂಚಿಗಳನ್ನು ಮತ್ತು ಸಲಹೆಗಳನ್ನು ನಾವು ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸುತ್ತಿರುವ ಬೆನ್ನಲ್ಲೇ, ಕೈಗಾರಿಕೋದ್ಯಮಿಗಳು, ಟಿವಿ ಮತ್ತು ಸಿನಿಮಾ ನಿರ್ಮಾಪಕರ ಜತೆ ಸಭೆಗಳನ್ನು ನಡೆಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ADVERTISEMENT

ಮಹಾರಾಷ್ಟ್ರದಲ್ಲಿ ‘ಅನ್‌ಲಾಕ್ 2.0’ ಸೋಮವಾರದಿಂದ ಜಾರಿಗೆ ಬರಲಿದೆ. ಸೋಂಕು ದೃಢೀಕರಣ ಪ್ರಮಾಣ ಮತ್ತು ಆಮ್ಲಜನಕ ಹಾಸಿಗೆಗಳ ಲಭ್ಯತೆ ಆಧಾರದಲ್ಲಿ ರಾಜ್ಯವನ್ನು ಐದು ಹಂತಗಳಲ್ಲಿ ವಿಂಗಡಿಸಿ ಲಾಕ್‌ಡೌನ್ ತೆರವು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

ಅನ್‌ಲಾಕ್ ಪ್ರಕ್ರಿಯೆಯ ಸಂದರ್ಭ ಎಚ್ಚರಿಕೆಯಿಂದ ಇರಬೇಕಿದೆ. ತಕ್ಷಣವೇ ಯಾವುದನ್ನೂ ಸಡಿಲಗೊಳಿಸುವಂತಿಲ್ಲ. ಕೆಲವು ಮಾನದಂಡಗಳು ಮತ್ತು ಹಂತಗಳನ್ನು ನಿಗದಿಪಡಿಸಲಾಗಿದೆ. ನಿರ್ಬಂಧಗಳನ್ನು ಬಿಗಿಗೊಳಿಸಬೇಕೇ ಅಥವಾ ಸಡಿಲಗೊಳಿಸಬೇಕೇ ಎಂಬುದನ್ನು ಸ್ಥಳೀಯಾಡಳಿತಗಳು ನಿರ್ಧರಿಸಲಿವೆ ಎಂದೂ ಠಾಕ್ರೆ ಹೇಳಿದ್ದಾರೆ.

ಕೋವಿಡ್ ಮೂರನೇ ಅಲೆಯ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಕೈಗಾರಿಕಾ ಉತ್ಪಾದನೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.