ADVERTISEMENT

ಏಕರೂಪ ನಾಗರಿಕ ಸಂಹಿತೆ ಮಸೂದೆಯು ಬಜೆಟ್‌ ಅಧಿವೇಶನದಲ್ಲೇ ಅಂಗೀಕಾರವಾಗಲಿ: ಶಿಂದೆ ಬಣ

ಪಿಟಿಐ
Published 31 ಜನವರಿ 2024, 2:47 IST
Last Updated 31 ಜನವರಿ 2024, 2:47 IST
<div class="paragraphs"><p>ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ</p></div>

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ

   

ಪಿಟಿಐ ಚಿತ್ರ

ಮುಂಬೈ: ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಮಸೂದೆಯು ಈ ಬಾರಿಯ ಕೇಂದ್ರ ಬಜೆಟ್‌ ಅಧಿವೇಶನದ ವೇಳೆಯೇ ಅಂಗೀಕಾರಗೊಳ್ಳಬೇಕು ಎಂದು ಶಿವಸೇನಾ ಪಕ್ಷದ ಏಕನಾಥ ಶಿಂದೆ ಬಣ ಆಗ್ರಹಿಸಿದೆ.

ADVERTISEMENT

ಬಜೆಟ್‌ ಅಧಿವೇಶನದ ಮುನ್ನಾದಿನ (ಜನವರಿ 30, ಮಂಗಳವಾರ) ದೆಹಲಿಯಲ್ಲಿ ನಡೆದ ಸರ್ವಪಕ್ಷಗಳ ಸಭೆ ಬಳಿಕ, ಶಿವಸೇನಾ ಸಂಸದ ರಾಹುಲ್‌ ಶೆವೆಲೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಲೋಕಸಭೆಯಲ್ಲಿ ಶಿವಸೇನಾ ನಾಯಕರಾಗಿರುವ ಶೆವೆಲೆ, ಈ ಬಜೆಟ್‌ ಅಧಿವೇಶನವು ಸಾರ್ವತ್ರಿಕ ಚುನಾವಣೆಗೂ ಮುನ್ನ ನಡೆಯುವ ಕೊನೇ ಅಧಿವೇಶನವಾಗಲಿದೆ. ಹಾಗಾಗಿ, ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ರೂಪಿಸುವ ಪ್ರತಿ ಮಸೂದೆಯನ್ನೂ ತಮ್ಮ ಪಕ್ಷ ಬೆಂಬಲಿಸಲಿದೆ ಎಂದಿರುವ ಅವರು, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವ ನಿರ್ಣಯವೂ ಸಂಸತ್ತಿನಲ್ಲಿ ಅಂಗೀಕಾರವಾಗಬೇಕು. ಎಲ್ಲ ಪಕ್ಷಗಳೂ ಅದನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರುವರಿ 1ರಂದು ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ. ಇದರ ಮೇಲಿನ ಅಧಿವೇಶನವು ಜನವರಿ 31ರಿಂದ ಫೆಬ್ರುವರಿ 9ರ ವರೆಗೆ ನಡೆಯಲಿದೆ. ಲೋಕಸಭೆ ಚುನಾವಣೆ ಬಳಿಕ ರಚನೆಯಾಗುವ ಹೊಸ ಸರ್ಕಾರವು ಪೂರ್ಣಪ್ರಮಾಣದ ಬಜೆಟ್ ಮಂಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.