ಏಕನಾಥ ಶಿಂದೆ
ಪಿಟಿಐ
ಮುಂಬೈ: ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಬಿಜೆಪಿ ತೀರ್ಮಾನಿಸಲಿದೆ ಎಂದು ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ಏಕನಾಥ ಶಿಂದೆ ಭಾನುವಾರ ಹೇಳಿದ್ದಾರೆ. ಸರ್ಕಾರ ರಚನೆ ವಿಚಾರವಾಗಿ ‘ಮಹಾಯುತಿ’ ಮೈತ್ರಿಕೂಟದಲ್ಲಿ ಭಿನ್ನಮತ ಇಲ್ಲ ಎಂದು ಹೇಳಿದ್ದಾರೆ.
ಶಿಂದೆ ಅವರ ಪುತ್ರ ಶ್ರೀಕಾಂತ ಶಿಂದೆ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಸಿಗಬಹುದು, ಶಿವಸೇನಾ ಪಕ್ಷಕ್ಕೆ ಗೃಹ ಖಾತೆಯನ್ನು ನೀಡಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಇವೆ. ‘ಮಹಾಯುತಿ’ ಮೈತ್ರಿಕೂಟದ ಬಿಜೆಪಿ, ಎನ್‌ಸಿಪಿ ಮತ್ತು ಶಿವಸೇನಾ ಜೊತೆಯಾಗಿ ಸರ್ಕಾರ ರಚನೆ ಕಾರ್ಯವನ್ನು ಸಹಮತದೊಂದಿಗೆ ಪೂರ್ಣಗೊಳಿಸಲಿವೆ ಎಂದು ಏಕನಾಥ ಶಿಂದೆ ಹೇಳಿದ್ದಾರೆ.
ಶಿವಸೇನಾ ಮತ್ತು ಎನ್‌ಸಿಪಿ ತಮ್ಮ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿವೆ. ಆದರೆ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ಇನ್ನಷ್ಟೇ ನಡೆಯಬೇಕಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡಣವೀಸ್ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಬಿಜೆಪಿಯ ಮೂಲಗಳು ಹೇಳಿವೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಡಿಸೆಂಬರ್ 3 ಅಥವಾ 4ರಂದು ನಡೆಯಬಹುದು ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ಡಿಸೆಂಬರ್ 5ರಂದು ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಮಾತ್ರವೇ ಪ್ರಮಾಣವಚನ ಸ್ವೀಕರಿಸುವರೋ ಅಥವಾ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸುವರೋ ಎಂಬುದನ್ನು ‘ಮಹಾಯುತಿ’ ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ತೀರ್ಮಾನಿಸಲಿವೆ ಎಂದು ಗೊತ್ತಾಗಿದೆ.
ಮುಂಬೈಗೆ ತೆರಳುವ ಮೊದಲು ತಮ್ಮ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಏಕನಾಥ ಶಿಂದೆ, ‘ಸಿ.ಎಂ ಹುದ್ದೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕತ್ವ ತೆಗೆದುಕೊಳ್ಳುವ ತೀರ್ಮಾನವನ್ನು ನಾನು ಒಪ್ಪುತ್ತೇನೆ, ಅದಕ್ಕೆ ನನ್ನ ಪೂರ್ಣ ಬೆಂಬಲ ಇರಲಿದೆ ಎಂಬುದನ್ನು ಈಗಾಗಲೇ ಹೇಳಿದ್ದೇನೆ’ ಎಂದರು.
‘ನಾವು ಜನರ ಮಹತ್ವಾಕಾಂಕ್ಷೆಗಳನ್ನು ಈಡೇರಿಸುತ್ತೇವೆ. ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ. ನಾವು ಜನರ ಹಿತವನ್ನು ಗಮನದಲ್ಲಿ ಇರಿಸಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.
ಬಿಜೆಪಿಯ ಹಿರಿಯ ಮುಖಂಡ ರಾವಸಾಹೇಬ ದಾನ್ವೆ ಅವರು ಸ್ಥಳೀಯ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ್ದು, ‘ಮುಖ್ಯಮಂತ್ರಿ ಯಾರು ಎಂಬುದು ತೀರ್ಮಾನ ಆಗಿದೆ, ಪಕ್ಷದ ನಾಯಕತ್ವದಿಂದ ಅದು ಖಚಿತವಾಗುವುದನ್ನು ಕಾಯಲಾಗುತ್ತಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.