ADVERTISEMENT

ಬೆದರಿಕೆ, ಸುಲಿಗೆಗಳಿಂದ ರಕ್ಷಿಸಿ; ಗುತ್ತಿಗೆದಾರರಿಂದ ಸರ್ಕಾರಕ್ಕೆ ಮೊರೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 16:31 IST
Last Updated 5 ಫೆಬ್ರುವರಿ 2024, 16:31 IST
ಏಕನಾಥ್ ಶಿಂದೆ
ಏಕನಾಥ್ ಶಿಂದೆ   

ಮುಂಬೈ: ರಾಜಕೀಯ ಕಾರಣಗಳಿಗಾಗಿ ಕೆಲಸಕ್ಕೆ ಅಡ್ಡಿಪಡಿಸುವುದು ಸೇರಿದಂತೆ ಬೆದರಿಕೆ, ಸುಲಿಗೆಗಳಿಂದ ತಮಗೆ ರಕ್ಷಣೆ ಒದಗಿಸಲು ಶಾಸನ ರೂಪಿಸುವಂತೆ ಮಹಾರಾಷ್ಟ್ರದ ಎರಡು ಸರ್ಕಾರಿ ಗುತ್ತಿಗೆದಾರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.

ಮಹಾರಾಷ್ಟ್ರ ರಾಜ್ಯ ಗುತ್ತಿಗೆದಾರರ ಸಂಘ (ಎಂಎಸ್‌ಸಿಎ) ಮತ್ತು ರಾಜ್ಯ ಎಂಜಿನಿಯರ್‌ಗಳ ಸಂಘ (ಎಸ್‌ಇಎ) ಮುಖ್ಯಮಂತ್ರಿ ಏಕನಾಥ್ ಶಿಂದೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್ ಹಾಗೂ ಅಜಿತ್ ಪವಾರ್ ಅವರಿಗೆ ಈ ಕುರಿತು ಫೆ. 3ರಂದು ಪತ್ರ ಬರೆದಿವೆ.     

‘ರಾಜ್ಯದ ಪ್ರತಿ ಜಿಲ್ಲೆಯಲ್ಲೂ ರಾಜಕೀಯ ವಿರೋಧಿ ಬಣಗಳು ಕೆಲಸ ಸ್ಥಗಿತಗೊಳಿಸುವಂತೆ ಬಲ ಪ್ರಯೋಗ ಮಾಡುತ್ತಿವೆ. ಗುತ್ತಿಗೆದಾರರ ಮೇಲೆ ದೈಹಿಕ ಹಿಂಸೆ ನಡೆಸಲಾಗುತ್ತಿದ್ದು, ಸುಲಿಗೆ ಮಾಡಲಾಗುತ್ತಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ADVERTISEMENT

‘ಶಾಸಕರು, ಸಂಸದರು ಮತ್ತು ಇತರ ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳಿಗೆ ಬೃಹತ್ ಮೊತ್ತದ ಹಣ ಮಂಜೂರು ಮಾಡಿಸಿಕೊಂಡು ಬರುತ್ತಿದ್ದು, ರಾಜಕೀಯ ವಿರೋಧಿ ಗುಂಪುಗಳು ಕಾಮಗಾರಿಗೆ ತಡೆಯೊಡ್ಡುತ್ತಿವೆ. ರಾಜ್ಯದಲ್ಲಿ ₹1 ಲಕ್ಷ ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿದ್ದು, ಸ್ಥಳೀಯ ಮಟ್ಟದಲ್ಲಿ ಗುತ್ತಿಗೆದಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ನಾವು ಫೆಬ್ರುವರಿ ಕೊನೆಯಿಂದ ಕೆಲಸವನ್ನು ಸ್ಥಗಿತಗೊಳಿಸುತ್ತೇವೆ’ ಎಂದು ಎಂಎಸ್‌ಸಿಎ ಮತ್ತು ಎಸ್‌ಇಎ ಎರಡು ಸಂಸ್ಥೆಗಳ ಅಧ್ಯಕ್ಷರಾದ ಮಿಲಿಂದ್ ಭೋಸ್ಲೆ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.