ADVERTISEMENT

ಬೇನಾಮಿ ಆಸ್ತಿ ಪ್ರಕರಣ: ಮಹಾ DCM ಅಜಿತ್ ಪವಾರ್‌ಗೆ ಕ್ಲೀನ್‌ ಚಿಟ್ ನೀಡಿದ IT

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಡಿಸೆಂಬರ್ 2024, 10:56 IST
Last Updated 7 ಡಿಸೆಂಬರ್ 2024, 10:56 IST
ಅಜಿತ್‌ ಪವಾರ್‌
ಅಜಿತ್‌ ಪವಾರ್‌   

ಮುಂಬೈ: ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ವಿರುದ್ಧ 2021ರಲ್ಲಿ ದಾಖಲಾಗಿದ್ದ ₹1 ಸಾವಿರ ಕೋಟಿ ಮೊತ್ತದ ಬೇನಾಮಿ ಆಸ್ತಿ ಖರೀದಿ ಪ್ರಕರಣದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್‌ ಅವರಿಗೆ ಆದಾಯ ತೆರಿಗೆ ಇಲಾಖೆ ನ್ಯಾಯಮಂಡಳಿ ಕ್ಲೀನ್ ಚಿಟ್ ನೀಡಿದೆ.

ಪ್ರಕರಣದಲ್ಲಿ ಆರೋಪ ಸಾಭೀತುಪಡಿಸುವ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮಂಡಳಿ ಪ್ರಕರಣವನ್ನು ಕೈಬಿಟ್ಟಿದೆ. ಇದರಿಂದಾಗಿ ಜಪ್ತಿ ಮಾಡಿದ್ದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆಯು ವಾರಸುದಾರರಿಗೆ ಹಿಂದಿರುಗಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

‘ಬೇನಾಮಿ ಆಸ್ತಿಯನ್ನು ಖರೀದಿ ಮಾಡಲು ಅಜಿತ್ ಪವಾರ್ ಹಾಗೂ ಅವರ ಕುಟುಂಬದವರಾದ ಸುನೇತ್ರಾ ಪವಾರ್ ಹಾಗೂ ಪಾರ್ಥ ಪವಾರ್ ಅವರು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಕುರಿತು ಯಾವುದೇ ಪುರಾವೆಗಳನ್ನು ಹಾಜರುಪಡಿಸಲು ಆದಾಯ ತೆರಿಗೆ ಇಲಾಖೆ ವಿಫಲವಾಗಿದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

ADVERTISEMENT

ಎನ್‌ಸಿಪಿ ಮುಖಂಡ ಅಜಿತ್ ಅವರಿಗೆ ಸೇರಿದ ಹಲವು ಸ್ಥಳಗಳ ಮೇಲೆ 2021ರ ಅಕ್ಟೋಬರ್‌ನಲ್ಲಿ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿತ್ತು. ಅಕ್ರಮವಾಗಿ ಹಣ ವರ್ಗಾವಣೆ ಮಾಡಿ, ಬೇನಾಮಿ ಆಸ್ತಿ ಖರೀದಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಮಹಾರಾಷ್ಟ್ರದ ಹಲವೆಡೆ ಜಮೀನು, ದೆಹಲಿಯಲ್ಲಿನ ಅಪಾರ್ಟ್‌ಮೆಂಟ್‌, ಸತಾರಾದಲ್ಲಿರುವ ಜರಂದೇಶ್ವರ ಸಕ್ಕರೆ ಕಾರ್ಖಾನೆ, ಗೋವಾದಲ್ಲಿರುವ ರೆಸಾರ್ಟ್‌ಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿತ್ತು.

ಆ ಸಂದರ್ಭದಲ್ಲಿ ಅಜಿತ್ ಪವಾರ್ ಅವರು ಅವಿಭಜಿತ ಎನ್‌ಸಿಪಿ ಮುಖಂಡರಾಗಿದ್ದರು. ನಂತರ ಶರದ್‌ ಪವಾರ್‌ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಪ್ರತ್ಯೇಕಗೊಂಡ ಅಜಿತ್, ಕೆಲ ಶಾಸಕರೊಂದಿಗೆ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವನ್ನು ಸೇರಿದರು. ಇದರಿಂದ ಏಕನಾಥ ಶಿಂದೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ಪಡೆದರು. ಈ ಬಾರಿಯ ದೇವೇಂದ್ರ ಫಡಣವೀಸ್ ಅವರ ಸರ್ಕಾರದಲ್ಲೂ ಅವರು ಉಪಮುಖ್ಯಮಂತ್ರಿ ಆಗಿದ್ದಾರೆ. 

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಅಜಿತ್ ಪವಾರ್, ‘ನಾನು ಬಿಜೆಪಿ ಜೊತೆ ಹೋಗಿದ್ದು ಯಾವಾಗ? 1.5 ವರ್ಷಗಳಾದವು. ಎಲ್ಲಾ ಸಂದರ್ಭಗಳಲ್ಲೂ ಆರೋಪಗಳನ್ನು ಒಪ್ಪಿಕೊಳ್ಳಲಾಗದು. ಮೇಲ್ಮನವಿ ಸಲ್ಲಿಸಲು ಎಲ್ಲಿರಿಗೂ ಅವಕಾಶಗಳಿವೆ’ ಎಂದಷ್ಟೇ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.