ADVERTISEMENT

ಮಹಾರಾಷ್ಟ್ರವು ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನದ ಪರ: ಫಡಣವೀಸ್

ಪಿಟಿಐ
Published 19 ಮಾರ್ಚ್ 2025, 13:40 IST
Last Updated 19 ಮಾರ್ಚ್ 2025, 13:40 IST

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್    

ಮುಂಬೈ: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್(ಕೆಆರ್‌ಸಿಎಲ್) ಅನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಬುಧವಾರ ವಿಧಾನ ಪರಿಷತ್ತಿನಲ್ಲಿ ಘೋಷಿಸಿದ್ದಾರೆ.

ಈ ಕ್ರಮವು ಕೆಆರ್‌ಸಿಎಲ್ ತನ್ನ ಆರ್ಥಿಕ ನಿರ್ಬಂಧಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಕೊಂಕಣ ರೈಲ್ವೆ ಎಂಬ ಹೆಸರನ್ನು ಉಳಿಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ, ಕೆಆರ್‌ಸಿಎಲ್ ಭಾರತೀಯ ರೈಲ್ವೆಯ ಆಡಳಿತ ನಿಯಂತ್ರಣದಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ.

ADVERTISEMENT

‘ಮಹಾರಾಷ್ಟ್ರವು ವಿಲೀನಕ್ಕೆ ತನ್ನ ಒಪ್ಪಿಗೆಯನ್ನು ಕೇಂದ್ರಕ್ಕೆ ತಿಳಿಸುತ್ತದೆ’ಎಂದು ರಾಜ್ಯ ಶಾಸಕಾಂಗದ ಮೇಲ್ಮನೆಯಲ್ಲಿ ಬಿಜೆಪಿಯ ಪ್ರವೀಣ್ ದಾರೇಕರ್ ಅವರ ಪ್ರಶ್ನೆಗೆ ಉತ್ತರಿಸುತ್ತಾ ಫಡಣವೀಸ್ ಈ ರೀತಿ ಹೇಳಿದ್ದಾರೆ.

‘ರೈಲ್ವೆ ಹಳಿಗಳನ್ನು ದ್ವಿಗುಣಗೊಳಿಸುವುದಾಗಲಿ ಅಥವಾ ಭೂಕುಸಿತ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದಾಗಲಿ, ನಿಧಿಯ ಕೊರತೆಯಿಂದಾಗಿ ನಿಗಮವು ಅವುಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಹಲವು ಚರ್ಚೆಗಳು ನಡೆದಿದ್ದು, ರೈಲ್ವೆ ಸಚಿವರು ಪರಿಹಾರವಾಗಿ ವಿಲೀನವನ್ನು ಪ್ರಸ್ತಾಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಕೇರಳ, ಕರ್ನಾಟಕ ಮತ್ತು ಗೋವಾ ಈಗಾಗಲೇ ಅನುಮೋದನೆ ನೀಡಿವೆ. ನಮ್ಮ ಒಪ್ಪಿಗೆಯನ್ನು ಸೂಚಿಸುವಾಗ, ಕೊಂಕಣ ರೈಲ್ವೆ ಎಂಬ ಹೆಸರನ್ನು ಉಳಿಸಿಕೊಳ್ಳಲು ನಾವು ಕೇಂದ್ರ ಸರ್ಕಾರಕ್ಕೆ ವಿನಂತಿಸಿದ್ದೇವೆ’ಎಂದು ಫಢಣವೀಸ್ ಹೇಳಿದ್ದಾರೆ.

ವಿಲೀನದ ನಂತರ, ಕೊಂಕಣ ರೈಲ್ವೆ ಹಳಿಗಳ ದ್ವಿಗುಣಗೊಳಿಸುವಿಕೆ, ನಿಲ್ದಾಣಗಳ ಆಧುನೀಕರಣ ಮತ್ತು ಅಪಘಾತ-ತಡೆಗಟ್ಟುವ ಕ್ರಮಗಳ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ಪಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.