ADVERTISEMENT

ಕಾಂಗ್ರೆಸ್‌ ಬೆಂಬಲದೊಂದಿಗೆ ಶಿವಸೇನಾ–ಎನ್‌ಸಿಪಿ ಮೈತ್ರಿ ಸರ್ಕಾರ ಸಾಧ್ಯತೆ

ಪೃಥ್ವಿರಾಜ್ ಎಂ ಎಚ್
Published 11 ನವೆಂಬರ್ 2019, 7:17 IST
Last Updated 11 ನವೆಂಬರ್ 2019, 7:17 IST
   

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಿಂದ ಬಿಜೆಪಿ ಹಿಂದೆ ಸರಿದ ಬಳಿಕ ಮರಾಠ ನೆಲದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಶಿವಸೇನಾ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ.

ಮೈತ್ರಿ ಪಕ್ಷಗಳಾದ ಬಿಜೆಪಿ–ಶಿವಸೇನಾ ಸರ್ಕಾರ ರಚಿಸುವ ಸಂಖ್ಯಾಬಲವನ್ನು ಹೊಂದಿದ್ದರೂ ಮುಖ್ಯಮಂತ್ರಿ ಸ್ಥಾನ ಹಾಗೂ ಅಧಿಕಾರ ಹಂಚಿಕೆ ಕುರಿತಾಗಿ ಮೂಡದ ಒಮ್ಮತದಿಂದ ಮೈತ್ರಿ ಮುರಿದುಬಿದ್ದಂತಾಗಿದೆ.

ಮೈತ್ರಿ ಪಕ್ಷ ಶಿವಸೇನಾ ಸರ್ಕಾರ ರಚನೆಗೆ ಅಗತ್ಯ ಸಹಕಾರ ನೀಡದಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ರಚನೆ ಪ್ರಯತ್ನವನ್ನುಕೈಬಿಟ್ಟಿದ್ದೇವೆ ಎಂದು ಬಿಜೆಪಿ ಭಾನುವಾರ ಪ್ರಕಟಿಸಿದ ಬಳಿಕ ಶಿವಸೇನಾ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ ರಾಜ್ಯಪಾಲರು ಶಿವಸೇನಾಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿರುವುದರಿಂದ ಸೇನಾ ಪಾಳಯದಲ್ಲಿ ಸರ್ಕಾರ ರಚಿಸುವ ಕಾರ್ಯತಂತ್ರಗಳು ಆರಂಭವಾಗಿವೆ.

ADVERTISEMENT

ಶಿವಸೇನಾ ನಾಯಕರು ಬಿಜೆಪಿ ವಿರುದ್ಧ ಮಾಡುತ್ತಿರುವ ವಾಗ್ದಾಳಿಗಳೇ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಬೆಂಬಲದೊಂದಿಗೆಶಿವಸೇನಾ ಸರ್ಕಾರ ರಚಿಸಲಿದೆಎಂಬುದನ್ನು ಪುಷ್ಟೀಕರಿಸುತ್ತಿವೆ. ಸೇನಾ ನಾಯಕ ಸಂಜಯ್‌ ರಾವುತ್‌ ಕಾಶ್ಮೀರದಲ್ಲಿ ಬಿಜೆಪಿಯವರು ಪಿಡಿಪಿ ಜೊತೆಗೆ ಸರ್ಕಾರ ರಚಿಸುವುದಾದರೆ ನಾವ್ಯಾಕೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜೊತೆ ಸರ್ಕಾರ ರಚನೆ ಮಾಡಬಾರದು ಎಂದುಅವರು ಪ್ರಶ್ನಿಸಿದ್ದಾರೆ.

ಸಾಧ್ಯತೆಗಳು ಏನು?

ಮಹಾರಾಷ್ಟ್ರದಲ್ಲಿಅತಂತ್ರ ಚುನಾವಣೆ ಫಲಿತಾಂಶ ಬಂದ ಬಳಿಕ ಶಿವಸೇನಾ ನಾಯಕ ಉದ್ದವ್‌ ಠಾಕ್ರೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸುವ ಬಗ್ಗೆ ಚರ್ಚೆ ನಡೆಸಿದ್ದರು.ಶಿವಸೇನಾ ಎನ್‌ಡಿಎ ಮೈತ್ರಿಕೂಟದಿಂದ ಹೊರಬರಬೇಕು ಎಂಬ ಷರತ್ತನ್ನುಶರದ್‌ ಪವಾರ್‌ ವಿಧಿಸಿದ್ದರು. ಇದರಿಂದ ಹಿಂದೆ ಸರಿದಿದ್ದ ಶಿವಸೇನಾ ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿತ್ತು. ಸಿಎಂ ಸ್ಥಾನ ನೀಡದಿರುವ ಬಗ್ಗೆ ಬಿಜೆಪಿ ತೀರ್ಮಾನ ಕೈಗೊಂಡ ಬಳಿಕ ಶಿವಸೇನಾ ಎನ್‌ಸಿಪಿ ಕಡೆ ಮುಖ ಮಾಡಿದೆ.

ಸಮಾನ ಅಧಿಕಾರ ಹಂಚಿಕೆ ಅಧಾರದ ಮೇಲೆಶಿವಸೇನಾ–ಎನ್‌ಸಿಪಿ ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆಗಳಿವೆ. ಇದಕ್ಕೆ ಕಾಂಗ್ರೆಸ್‌ ಬಾಹ್ಯ ಬೆಂಬಲ ನೀಡಲಿದೆ ಎನ್ನಲಾಗಿದೆ. ಸೋಮವಾರ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆಯಲಿರುವ ಸಭೆ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಹೇಗಾದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬುದು ಕಾಂಗ್ರೆಸ್‌ ಪಕ್ಷದ ಬಯಕೆಯಾಗಿದೆ. ಶಿವಸೇನಾ ಎನ್‌ಡಿಎ ಮೈತ್ರಿಕೂಟದಿಂದ ಹೊರಬರಬೇಕು ಎಂಬ ಷರತ್ತಿನೊಂದಿಗೆ ಬೆಂಬಲ ನೀಡುವ ಸಾಧ್ಯತೆಗಳಿವೆ. ಶಿವಸೇನಾ ಪ್ರಾದೇಶಿಕ ಪಕ್ಷವಾಗಿರುವುದರಿಂದ ರಾಷ್ಟಮಟ್ಟದಲ್ಲಿ ಕಾಂಗ್ರೆಸ್‌ಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಹಾಗೂ ಬಿಜೆಪಿಯೇತರ ಸರ್ಕಾರ ರಚಿಸುವುದರಿಂದ ಮಹಾರಾಷ್ಟ್ರದಲ್ಲಿ ಪಕ್ಷ ಬಲಪಡಿಸಲು ಇದು ಸಕಾಲ ಎಂಬುದು ಪಕ್ಷದ ಹಿರಿಯರ ಅಭಿಪ್ರಾಯ.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯನ್ನು ತಮ್ಮ ಪಕ್ಷ ಬಯಸುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಅಶೋಕ್‌ ಚವಾಣ್‌ ಹೇಳಿದ್ದಾರೆ. ಈ ಮೂಲಕ, ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಸಿದ್ಧ ಎಂಬ ಸುಳಿವನ್ನು ಅವರು ನೀಡಿದ್ದಾರೆ.ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು ಎಂಬುದು ಕಾಂಗ್ರೆಸ್‌ ಶಾಸಕರಲ್ಲಿ ಹೆಚ್ಚಿನವರ ಅಭಿಪ್ರಾಯ ಎನ್ನಲಾಗಿದೆ. ಸದ್ಯಕ್ಕೆ ಕಾಂಗ್ರೆಸ್‌ ಶಾಸಕರು ಜೈಪುರದಲ್ಲಿದ್ದಾರೆ.

ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿರುವ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಕಾಂಗ್ರೆಸ್‌ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಬಾಹ್ಯ ಬೆಂಬಲ ನೀಡುವ ತೀರ್ಮಾನ ತೆಗೆದುಕೊಂಡರೆ ಮಹಾರಾಷ್ಟ್ರದಲ್ಲಿ ಶಿವಸೇನಾ–ಎನ್‌ಸಿಪಿ ನೇತೃತ್ವದ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಲಿದೆ.

ಮಹಾರಾಷ್ಟ್ರ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಶಿವಸೇನಾಗೆ ಬೆಂಬಲ ನೀಡುವುದು ಬೇಡ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಹಿರಿಯ ನಾಯಕ ಸಂಜಯ್‌ ನಿರುಪಮ್‌ ಅವರು ಶಿವಸೇನಾಗೆ ಬೆಂಬಲ ನೀಡುವುದು ಬೇಡ ಎಂದು ನೇರವಾಗಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಾಧ್ಯತೆ ಮಾತ್ರ ಕಾಂಗ್ರೆಸ್‌ ನಿರ್ಧಾರದ ಮೇಲೆ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.