ADVERTISEMENT

ಬೆಳಗಾವಿ ಎಂಇಎಸ್‌ ಮುಖಂಡನ ಮುಖಕ್ಕೆ ಮಸಿ: ಮಹಾರಾಷ್ಟ್ರ ಸರ್ಕಾರ ಖಂಡನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 11:26 IST
Last Updated 14 ಡಿಸೆಂಬರ್ 2021, 11:26 IST
ಎಂಇಎಸ್ ಮುಖಂಡ ದೀಪಕ ದಳವಿ ಅವರಿಗೆ ಕಪ್ಪು ಮಸಿ ಬಳಿದಿರುವುದು
ಎಂಇಎಸ್ ಮುಖಂಡ ದೀಪಕ ದಳವಿ ಅವರಿಗೆ ಕಪ್ಪು ಮಸಿ ಬಳಿದಿರುವುದು   

ಮುಂಬೈ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮುಖಂಡ ದೀಪಕ ದಳವಿ ಅವರ ಮುಖಕ್ಕೆ ಮಸಿ ಬಳಿದಿದ್ದನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರ ಖಂಡಿಸಿದೆ.

ಬೆಳಗಾವಿಯ ಟಿಳಕವಾಡಿಯಲ್ಲಿ ಎಂಇಎಸ್‌ ವತಿಯಿಂದ ಸೋಮವಾರ ಆಯೋಜಿಸಿದ್ದ ಮಹಾ ಮೇಳಾವ್‌ನಲ್ಲಿ ದೀಪಕ್‌ ದಳವಿ ಮುಖಕ್ಕೆ ಮಸಿ ಬಳಿಯಲಾಗಿತ್ತು.

ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೋಡಿಕೊಳ್ಳುವ ಉಸ್ತುವಾರಿ ಮಂತ್ರಿಯೂ ಆಗಿರುವ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಸೇರಿದಂತೆ ಎಂವಿಎ ನಾಯಕರು ಘಟನೆಯನ್ನು ಮಂಗಳವಾರ ಖಂಡಿಸಿದ್ದಾರೆ.

ADVERTISEMENT

‘ಇದು ಪೂರ್ವ ಯೋಜಿತ ಮತ್ತು ಇದು ಮರಾಠಿಗರ ಮೇಲಿನ ದಾಳಿ. ಈ ಘಟನೆಯು ಮರಾಠಿ ಜನರ ಚಳವಳಿಯನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದು ಅಜಿತ್‌ ಪವಾರ್‌ ಹೇಳಿದ್ದಾರೆ. ‘ಈ ಘಟನೆಯ ಹಿಂದೆ ಇರುವವರನ್ನು ಬಂಧಿಸಬೇಕು’ ಎಂದು ಶಿಂಧೆ ಒತ್ತಾಯಿಸಿದ್ದಾರೆ.

ಮರಾಠಿ ಭಾಷಿಗರ ಸಂಖ್ಯೆ ಹೆಚ್ಚಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್‌ ಗಡಿಯಲ್ಲಿರುವ 814 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಪ್ರತಿಪಾದಿಸುತ್ತ ಬಂದಿದೆ. ಈ ಸಮಸ್ಯೆ ಪರಿಹಾರವಾಗುವವರೆಗೂ ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಮಹಾರಾಷ್ಟ್ರವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.