ADVERTISEMENT

ಮಹಾರಾಷ್ಟ್ರ ಬಿಕ್ಕಟ್ಟು: ಸಾಧ್ಯವಾಗಲಿದೆಯೇ ಸೈದ್ಧಾಂತಿಕ ವಿರೋಧಿಗಳ ಮೈತ್ರಿ?

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 6:49 IST
Last Updated 11 ನವೆಂಬರ್ 2019, 6:49 IST
   

ಮುಂಬೈ: ದೇಶದ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ರಾಜಕಾರಣ ಪ್ರತಿ ಕ್ಷಣವೂ ಹೊಸ ತಿರುವು ಪಡೆಯುತ್ತಿದೆ. ಸರ್ಕಾರ ರಚಿಸಲು ಮಹಾರಾಷ್ಟ್ರ ರಾಜ್ಯಪಾಲರು ಶಿವಸೇನೆಗೆ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಶಿವಸೇನೆ ಸೇರಿದಂತೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಮಹಾರಾಷ್ಟ್ರದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸಿ, ಕೆಲ ಮಹತ್ವದ ನಿರ್ಧಾರಕೈಗೊಳ್ಳಲು ಇಂದು ಕಾರ್ಯಕಾರಿ ಸಮಿತಿ ಸಭೆ ಕರೆದಿವೆ. ಎನ್‌ಡಿಎಯಿಂದ ಹೊರಬರಲು ಶಿವಸೇನೆ ಸಿದ್ದತೆ ನಡೆಸಿರುವ ಬೆನ್ನಲ್ಲೇ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ನಾಯಕರು ವಿರೋಧ ಪಕ್ಷಗಳಾಗಿ ಕೆಲಸ ಮಾಡುತ್ತೇವೆ ಎನ್ನುವ ತಮ್ಮ ವರಸೆಯನ್ನು ಬದಲಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಇಂದು ನಡೆಯಲಿರುವ ಕಾಂಗ್ರೆಸ್‌ ಕಾರ್ಯಕಾರಿ ಸಭೆಯಲ್ಲಿ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿ ಕೆಲ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ತಮ್ಮ ಸೈದ್ಧಾಂತಿಕ ಎದುರಾಳಿ ಶಿವಸೇನೆಗೆ ಯಾವುದೇ ಬೆಂಬಲವಿಲ್ಲ ಎಂದು ಸೋನಿಯಾ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಆದರೆ, ಮೇಲ್ನೋಟಕ್ಕೆ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕರು ಸೋನಿಯಾ ಅವರ ಅಭಿಪ್ರಾಯದ ಪರವಾಗಿದ್ದರೂ ಸಹ ತಮ್ಮ ಮುಂದಿನ ಆಯ್ಕೆಗಳು ಬದಲಾಗಬಹುದು ಎನ್ನುವ ದಾಟಿಯಲ್ಲಿ ಮಾತನಾಡುತ್ತಿದ್ದಾರೆ.

ADVERTISEMENT

ಇತ್ತ ಎನ್‌ಸಿಪಿ ನಾಯಕ ಶರದ್‌ ಪವಾರ್‌ ತಮ್ಮ ಪಕ್ಷದ ಕೋರ್‌ ಕಮಿಟಿ ಸಭೆ ಕರೆದಿದ್ದು, ತನ್ನ ಮಿತ್ರ ಪಕ್ಷ ಕಾಂಗ್ರೆಸ್‌ನೊಂದಿಗೆ ಚರ್ಚಿಸಿಯೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಶಿವಸೇನೆ ಮುಖಂಡ ಸಂಜಯ್‌ ರಾವತ್‌ ಅವರು ನವದೆಹಲಿಯಲ್ಲಿಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಬೆಂಬಲ ಯಾಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವೇಳೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಶಿವಸೇನೆಗೆ ಬೆಂಬಲ ನೀಡಿ ಸರ್ಕಾರ ರಚಿಸಲು ಮುಂದಾದರೆ, ಅದು ಮಹಾರಾಷ್ಟ್ರ ಅಷ್ಟೇ ಅಲ್ಲದೇ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ತಮ್ಮ ಸೈದ್ಧಾಂತಿಕವಿರೋಧಿ ಶಿವಸೇನೆಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಂಬಲ ನೀಡುವುದು ಸುಲಭವಿಲ್ಲ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಮುನ್ನೆಲೆಗೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.