
ಬಿಜೆಪಿ
ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗೆ ಕೆಲ ದಿನಗಳು ಬಾಕಿ ಉಳಿದಿದ್ದು, ರಾಜ್ಯದಾದ್ಯಂತ ಪುರಸಭೆ ಮತ್ತು ನಗರಸಭೆಗಳಲ್ಲಿ ಬಿಜೆಪಿಯ 100 ಕೌನ್ಸಿಲರ್‌ಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್ ಹೇಳಿದ್ದಾರೆ.
ಪುರಸಭೆಗಳ ಅಧ್ಯಕ್ಷರಾಗಿ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ನಾಯಕತ್ವದಿಂದಾಗಿ, ಮತದಾನಕ್ಕೂ ಮುಂಚೆಯೇ ಬಿಜೆಪಿಯ 100 ಅಭ್ಯರ್ಥಿಗಳು ಕೌನ್ಸಿಲರ್‌ಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ಎಂದು ಚವಾಣ್ ನಾಮಪತ್ರ ಹಿಂಪಡೆಯಲು ಕೊನೆಯ ದಿನ ಹೇಳಿದರು.
100 ಕೌನ್ಸಿಲರ್‌ಗಳಲ್ಲಿ, ನಾಲ್ವರು ಕರಾವಳಿ ಕೊಂಕಣ ಪ್ರದೇಶದಿಂದ, 49 ಮಂದಿ ಉತ್ತರ ಮಹಾರಾಷ್ಟ್ರದಿಂದ, 41 ಮಂದಿ ಪಶ್ಚಿಮ ಮಹಾರಾಷ್ಟ್ರದಿಂದ ಮತ್ತು ತಲಾ ಮೂವರು ಮರಾಠವಾಡ ಹಾಗೂ ವಿದರ್ಭ ಪ್ರದೇಶಗಳಿಂದ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 2ರಂದು 246 ಪುರಸಭೆಗಳು ಮತ್ತು 42 ನಗರಸಭೆಗಳಿಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತಗಳ ಎಣಿಕೆ ನಡೆಯಲಿದೆ.
ಅವಿರೋಧವಾಗಿ ಆಯ್ಕೆಯಾದವರ ಪೈಕಿ ಅನೇಕರು ಬಿಜೆಪಿ ನಾಯಕರ ಸಂಬಂಧಿಕರಾಗಿದ್ದಾರೆ. ಬಿಜೆಪಿಯ ವಂಶಪಾರಂಪರ್ಯ ರಾಜಕಾರಣದ ಸಂಪ್ರದಾಯವು ಈಗ ತಳಮಟ್ಟದ ಚುನಾವಣೆಗಳನ್ನು ತಲುಪಿದೆ ಮತ್ತು ನಾಯಕರ ಸಂಬಂಧಿಕರು ಅವಿರೋಧ ಗೆಲುವು ಸಾಧಿಸಲು ಪೊಲೀಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಜಾಮ್ನೇರ್‌ನಲ್ಲಿ, ಕಾಂಗ್ರೆಸ್ ಅಭ್ಯರ್ಥಿ ರೂಪಾಲಿ ಲಾಲ್ವಾನಿ ಮತ್ತು ಇಬ್ಬರು ಎನ್‌ಸಿಪಿ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದ ನಂತರ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಅವರ ಪತ್ನಿ ಸಾಧನಾ ಮಹಾಜನ್ ಅವರು ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.
ವಿರೋಧ ಪಕ್ಷದ ಅಭ್ಯರ್ಥಿ ಶರ್ಯು ಭಾವ್ಸರ್ ಅವರ ನಾಮಪತ್ರ ತಿರಸ್ಕೃತವಾದ ನಂತರ ಮಾರುಕಟ್ಟೆ ಸಚಿವ ಜಯಕುಮಾರ್ ರಾವಲ್ ಅವರ ತಾಯಿ ನಯನ್ ಕುನ್ವರ್ ರಾವಲ್ ಅವರು ಧುಲೆ ಜಿಲ್ಲೆಯ ದೊಂಡೈಚಾ-ವರ್ವಾಡೆ ಪುರಸಭೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಚಿವರ ಒತ್ತಡದ ಮೇರೆಗೆ ನಾಮಪತ್ರ ತಿರಸ್ಕೃತವಾಗಿದೆ ಎಂದು ಭಾವ್ಸರ್ ಆರೋಪಿಸಿದ್ದಾರೆ.
ಚಿಕಲ್ದಾರಾ ಪುರಸಭೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಸೋದರಸಂಬಂಧಿ ಅಲ್ಹಾದ್ ಕಲೋಟಿ ಅವರ ಅವಿರೋಧ ಗೆಲುವು ಮತ್ತೊಂದು ಪ್ರಮುಖ ಅವಿರೋಧ ಆಯ್ಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.