ಸಾವು (ಪ್ರಾತಿನಿಧಿಕ ಚಿತ್ರ)
ಠಾಣೆ: ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಲ್ಯಾಣ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಸ್ಲ್ಯಾಬ್ ಕುಸಿದ ಪರಿಣಾಮ ನಾಲ್ವರು ಮಹಿಳೆಯರು, ಎರಡು ವರ್ಷದ ಬಾಲಕಿ ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
52 ಕುಟುಂಬಗಳನ್ನು ಹೊಂದಿದ್ದ 30 ವರ್ಷ ಹಳೆಯ ಶ್ರೀ ಸಪ್ತಶೃಂಗಿ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ನೆಲಹಾಸು ಕೆಲಸ ಮಾಡುವಾಗ ಈ ಘಟನೆ ಸಂಭವಿಸಿದೆ ಕಲ್ಯಾಣ್ ಪ್ರದೇಶದ ಉಪ ವಿಭಾಗೀಯ ಅಧಿಕಾರಿ (ಎಸ್‌ಡಿಒ) ವಿಶ್ವಾಸ್ ಗುಜಾರ್ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್, ಜಿಲ್ಲಾ ವಿಪತ್ತು ಪಡೆ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಅವಶೇಷಗಳಡಿಯಲ್ಲಿ ಸಿಲುಕಿದ್ದ 11 ಮಂದಿಯನ್ನು ರಕ್ಷಿಸಿದ್ದಾರೆ. 30 ವರ್ಷ ಹಳೆಯದಾದ ಈ ಕಟ್ಟಡವು ಕಲ್ಯಾಣ್ ಪೂರ್ವದ ಜನನಿಬಿಡ ಪ್ರದೇಶದಲ್ಲಿದೆ. ಕಟ್ಟಡವು ವಾಸಕ್ಕೆ ಸುರಕ್ಷಿತವಾಗಿಲ್ಲದ ಕಾರಣ ಇದನ್ನು ಕೆಡವಲಾಗುವುದು ಎಂದು ಗುಜಾರ್ ತಿಳಿಸಿದ್ದಾರೆ.
ಮೃತರನ್ನು ನಮಸ್ವಿ ಶ್ರೀಕಾಂತ್ ಶೇಲಾರ್ (2), ಪ್ರಮೀಳಾ ಕಲ್ಚರಣ್ ಸಾಹು (56), ಸುನೀತಾ ನೀಲಾಂಚಲ್ ಸಾಹು (38), ಸುಶೀಲಾ ನಾರಾಯಣ ಗುಜಾರ್ (78), ವೆಂಕಟ್ ಭೀಮಾ ಚವ್ಹಾಣ್ (42) ಮತ್ತು ಸುಜಾತಾ ಮನೋಜ್ ವಾಡಿ (38) ಎಂದು ಗುರುತಿಸಲಾಗಿದೆ. ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮೃತರ ಸಂಬಂಧಿಕರಿಗೆ ತಲಾ ₹5 ಲಕ್ಷಪರಿಹಾರ ಘೋಷಿಸಿದ್ದಾರೆ. ಘಟನಾ ಸ್ಥಳದಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಅಗತ್ಯವಿರುವ ಎಲ್ಲಾ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಲೀಕನ ಬಂಧನ
ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಲ್ಯಾಣ್ ಪ್ರದೇಶದಲ್ಲಿ ಅಧಿಕಾರಿಗಳಿಂದ ಅನುಮತಿ ಪಡೆಯದೆ ಅಕ್ರಮವಾಗಿ ನೆಲಹಾಸು ಕೆಲಸ ಮಾಡಿಸುತ್ತಿದ್ದ ಆರೋಪದ ಮೇಲೆ ಫ್ಲಾಟ್ ಮಾಲೀಕ ಕೃಷ್ಣ ಲಾಲ್ಚಂದ್ ಚೌರಾಸಿಯಾ (40) ಅವರನ್ನು ಮಂಗಳವಾರ ತಡರಾತ್ರಿ ಬಂಧಿಸಲಾಗಿದೆ.
ಚೌರಾಸಿಯಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 ಮತ್ತು 125 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊಲ್ಸೆವಾಡಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಗಣೇಶ್ ನ್ಯಾಯಡೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.