ADVERTISEMENT

ನನಗೆ ಸೋಂಕು ತಗುಲಲು ನನ್ನ ಅಜಾಗರೂಕ ವರ್ತನೆಯೇ ಕಾರಣ: ಮಹಾರಾಷ್ಟ್ರ ಸಚಿವ ಜಿತೇಂದ್ರ

ಪಿಟಿಐ
Published 28 ಮೇ 2020, 6:49 IST
Last Updated 28 ಮೇ 2020, 6:49 IST
ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅವದ್‌
ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅವದ್‌   

ಮುಂಬೈ: ತಮಗೆ ಕೊರೊನಾ ವೈರಸ್‌ ಸೋಂಕು ತಗುಲಲು ತಮ್ಮ ಅಜಾಗರೂಕ ವರ್ತನೆಯೇ ಕಾರಣ ಎಂದು ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವದ್ ಸ್ವತಃ ತಮ್ಮನ್ನು ದೂಷಿಸಿಕೊಂಡಿದ್ದಾರೆ.

ಸೋಂಕ ತಗುಲಿ, ಮೇ ತಿಂಗಳ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವದ್‌, ‘ನನ್ನನ್ನು ಎರಡು ದಿನಗಳವರೆಗೆ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು,’ ಎಂದು ತಿಳಿಸಿದ್ದಾರೆ.

‘ನನ್ನ ಅಜಾಗರೂಕ ನಡವಳಿಕೆಗಳಿಂದಲೇ ಸೋಂಕು ತಗುಲಿತು. ನಾನು ಜನರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದಕ್ಕಾಗಿಯೇ ನಾನು ಕೋವಿಡ್‌ನ ಜಾಲಕ್ಕೆ ಸಿಲುಕಿದೆ,’ ಎಂದು ಎನ್‌ಸಿಪಿ ನಾಯಕರೂ ಆಗಿರುವ ಅವದ್‌ ಬುಧವಾರ ಆನ್‌ಲೈನ್‌ ಸಮಾಲೋಚನೆಯೊಂದರಲ್ಲಿ ಹೇಳಿಕೊಂಡರು.

ADVERTISEMENT

ಥಾಣೆಯ ಉಸ್ತುವಾರಿ ಸಚಿವರಾಗಿದ್ದ ಅವದ್‌, ಕೊರೊನಾ ವೈರಸ್‌ ಸಾಂಕ್ರಾಮಿಕಗೊಳ್ಳುತ್ತಿದ್ದ ಆರಂಭದ ದಿನಗಳಲ್ಲಿ ಜನರಿಗೆ ಪರಿಹಾರ ಒದಗಿಸುವ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು.

‘ನನ್ನ ಮನೋಬಲದ ಮೂಲಕ ನಾನು ಈ ಕಾಯಿಲೆಯಿಂದ ಪಾರಾಗಿ ಬಂದೆ. ಕೊನೆಯ ಎರಡು ವಾರಗಳಲ್ಲಿ ನಾನು ಅತಿ ವೇಗವಾಗಿ ಚೇತರಿಸಿಕೊಂಡೆ,’ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರ ಕೇಡರ್‌ನ ಸೋಂಕಿತ ಐಎಎಸ್‌ ಅಧಿಕಾರಿ ಸೇರಿದಂತೆ ಇತರ ಸೋಂಕಿತರಿಗೆ ಹೋಲಿಸಿಕೊಂಡರೆ, ಶೀಘ್ರ ಗುಣಮುಖರಾದ ತಮ್ಮನ್ನು ಅದೃಷ್ಟಶಾಲಿ ಎಂದು ಅವದ್‌ ಬಣ್ಣಿಸಿದ್ದಾರೆ. ಇತರ ಸೋಂಕಿತರ ಚಿಕಿತ್ಸೆಗೆ ವಿದೇಶದಿಂದ ಔಷಧಗಳನ್ನು ತರಿಸಲಾಯಿತು. ಪ್ಲಾಸ್ಮಾ ತೆರಪಿ ಮಾಡಲಾಯಿತು ಎಂದು ಅವರು ಹೇಳಿದರು.

ಭಾರಿ ಪ್ರಮಾಣದಲ್ಲಿ ಕುಸಿದಿದ್ದ ತಮ್ಮ ಹಿಮೋಗ್ಲೋಬಿನ್ ಮಟ್ಟವು ಸದ್ಯ ಏರಿಕೆಯಾಗಿದೆ. ಅಲ್ಲದೆ, ಆಹಾರದ ವಿಚಾರದಲ್ಲಿ ಈಗ ಅತ್ಯಂತ ಎಚ್ಚರಿಕೆಯಿಂದ ಇರುವುದಾಗಿಯೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.