ನಾಗ್ಪುರ: ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಸಚಿವ ಸಂಪುಟ ವಿಸ್ತರಿಸಿದ್ದು, ಭಾನುವಾರ 39 ಸಚಿವರು ಪ್ರಮಾಣವಚನ ಸ್ವೀಕರಿಸಿದರು.
1991ರ ನಂತರ ಇದೇ ಮೊದಲ ಬಾರಿಗೆ ಭಾನುವಾರ ನಾಗ್ಪುರ ರಾಜಭವನದಲ್ಲಿ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಬಿಜೆಪಿಯ 19, ಏಕನಾಥ ಶಿಂದೆ ನೇತೃತ್ವದ ಶಿವಸೇನಾ 11 ಮತ್ತು ಅಜಿತ್ ಪವಾರ್ ನೇತೃತ್ವದ 9 ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದರು. ಈ ಪೈಕಿ 33 ಜನ ಸಂಪುಟ ಸಚಿವರಾಗಿ ಮತ್ತು 6 ಜನ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ಪಿ.ಸಿ ರಾಧಾಕೃಷ್ಣನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನ ಸೋಮವಾರದಿಂದ (ಡಿ.16–21) ಆರಂಭವಾಗಲಿದೆ.
ಡಿ.5 ರಂದು ಮುಖ್ಯಮಂತ್ರಿಯಾಗಿ ದೇವೇಂದ್ರ ಫಡವೀಸ್ ಹಾಗೂ ಏಕನಾಥ ಶಿಂದೆ ಮತ್ತು ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಹೊಸ ಸಂಪುಟದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾನ್‌ಕುಲೆ ಮತ್ತು ಮುಂಬೈ ಬಿಜೆಪಿ ಅಧ್ಯಕ್ಷ ಆಶೀಶ್ ಶೆಲಾರ್ ಕೂಡ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.