ಮುಂಬೈ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಐವರು ನಾಪತ್ತೆಯಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಹಲವು ಮಂದಿ ಸಿಲುಕಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸೋಮವಾರ ತಿಳಿಸಿದ್ದಾರೆ.
ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಲಾತೂರ್, ಉದ್ಗೀರ್ ಮತ್ತು ನೆರೆಯ ರಾಜ್ಯಗಳಿಂದಲೂ ಹೆಚ್ಚಿನ ನೀರು ಈ ಪ್ರದೇಶಕ್ಕೆ ಹರಿದು ಬರುತ್ತಿರುವುದೇ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ ಎಂದೂ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್‌ನಲ್ಲಿ ಫಡಣವೀಸ್ ತಿಳಿಸಿದ್ದಾರೆ.
ಭಾನುವಾರ ಧಾರಾಕಾರ ಮಳೆಯಾಗಿದ್ದು, ಮುಖೇಡ್ ತಾಲೂಕಿನಲ್ಲಿ 20.6 ಸೆಂ.ಮೀ ಮಳೆ ದಾಖಲಾಗಿದೆ. 225ಕ್ಕೂ ಹೆಚ್ಚು ಮಂದಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವರನ್ನೂ ಸ್ಥಳಾಂತರಿಸಲಾಗಿದ್ದು, ಮತ್ತೆ ಕೆಲವರನ್ನೂ ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ ಎಂದು ಫಡಣವೀಸ್ ಹೇಳಿದ್ದಾರೆ.
ಎನ್‌ಡಿಆರ್‌ಎಫ್ ತಂಡ, ಸೇನೆ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ನಿರಂತರವಾಗಿ ಸಂಪರ್ಕದಲ್ಲಿ ಇರುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದೂ ಫಡಣವೀಸ್ ಹೇಳಿದ್ದಾರೆ.
ಜಿಲ್ಲೆಯ ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡಲಾಗುತ್ತಿದ್ದು, ನೆರೆಯ ತೆಲಂಗಾಣ ರಾಜ್ಯದ ಕಾರ್ಯದರ್ಶಿಯೊಂದಿಗೆ ಸಂಪರ್ಕದಲ್ಲಿದ್ದು, ಪೋಚಂಪಡ್ ಅಣೆಕಟ್ಟಿನಿಂದ ನೀರು ಬಿಡುಗಡೆಗೆ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಹುಲ್ ಕಾರ್ಡಿಲೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.