ADVERTISEMENT

ಶಿವಸೇನಾ ಜೊತೆ ಸರ್ಕಾರ ರಚಿಸಬಹುದಾದರೆ ಬಿಜೆಪಿ ಜೊತೆ ಏಕೆ ಆಗಬಾರದು?-ಪ್ರಫುಲ್‌ ಪಟೇಲ್

ಪಿಟಿಐ
Published 4 ಜುಲೈ 2023, 6:15 IST
Last Updated 4 ಜುಲೈ 2023, 6:15 IST
ಪ್ರಫುಲ್‌ ಪಟೇಲ್
ಪ್ರಫುಲ್‌ ಪಟೇಲ್   

ಮುಂಬೈ: ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರ ಪತನಗೊಂಡ ಬಳಿಕ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) 53 ಶಾಸಕರಲ್ಲಿ 51 ಮಂದಿ ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯತೆಯನ್ನು ಪರಿಶೀಲಿಸುವಂತೆ ಪಕ್ಷದ ಅಧ್ಯಕ್ಷ ಶರದ್ ಪವಾರ್‌ಗೆ ತಿಳಿಸಿದ್ದರು ಎಂದು ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್ ಹೇಳಿದ್ದಾರೆ.

'ಝಿ 24 ತಾಸ್‌'ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಪಟೇಲ್, ಶಿವಸೇನಾದೊಂದಿಗೆ ಎನ್‌ಸಿಪಿ ಸರ್ಕಾರ ರಚಿಸಬಹುದಾದರೆ ಬಿಜೆಪಿಯೊಂದಿಗೆ ಏಕೆ ಆಗಬಾರದು ಎಂದು ಪ್ರಶ್ನೆ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಎನ್‌ಸಿಪಿ ನಾಯಕ ಅಜಿತ್ ಪವಾರ್‌, ರಾಜಕೀಯ ಮಾರ್ಗದರ್ಶಕರೂ ಆಗಿದ್ದ ತಮ್ಮ ಚಿಕ್ಕಪ್ಪ, ಪಕ್ಷದ ಅಧ್ಯಕ್ಷ ಶರದ್‌ ಪವಾರ್‌ ಅವರನ್ನು ತೊರೆದು, ಬೆಂಬಲಿಗ ಶಾಸಕರೊಂದಿಗೆ ಬಿಜೆಪಿ–ಶಿವಸೇನಾ ಮೈತ್ರಿ ಸರ್ಕಾರಕ್ಕೆ ಸೇರ್ಪಡೆಯಾಗಿದ್ದರು.

ADVERTISEMENT

ಕಳೆದ ವರ್ಷ ಶಿವಸೇನಾ ಇಬ್ಭಾಗಗೊಂಡಿತ್ತು. ಬಳಿಕ ಬಿಜೆಪಿ ಬೆಂಬಲದೊಂದಿಗೆ ಏಕನಾಥ ಶಿಂದೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು. ಈಗ ಶಿಂದೆ ಸರ್ಕಾರದಲ್ಲಿ ಅಜಿತ್‌ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕಳೆದ ವರ್ಷವೇ ಬಿಜೆಪಿ ಮೈತ್ರಿಕೂಟದೊಂದಿಗೆ ಸೇರುವ ಕುರಿತು ಪಕ್ಷದಲ್ಲಿ ಆಂತರಿಕ ಚರ್ಚೆಗಳು ನಡೆದಿದ್ದವು ಎಂದು ಅಜಿತ್ ಪವಾರ್ ಬಣದಲ್ಲಿ ಗುರುತಿಸಿಕೂಂಡಿರುವ ಪ್ರಫುಲ್‌ ಪಟೇಲ್ ತಿಳಿಸಿದ್ದಾರೆ.

ಈ ವಿಷಯಗಳ ಕುರಿತು ಚರ್ಚೆಗಳು ನಡೆದಿವೆ. ಆದರೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಈಗ ನಿಲುವು ಸ್ಪಷ್ಟವಾಗಿದೆ. ಈ ನಿರ್ಧಾರವನ್ನು ಪಕ್ಷ ತೆಗೆದುಕೊಂಡಿದೆ. ನಾನು ಅಥವಾ ಅಜಿತ್ ಪವಾರ್ ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು.

ಪಕ್ಷ ಅಧಿಕಾರದಿಂದ ದೂರ ಉಳಿಯಬಾರದು. ಈ ಕುರಿತು ಎನ್‌ಸಿಪಿ ಸಚಿವರು ಶರದ್ ಪವಾರ್‌ಗೆ ಪತ್ರ ಬರೆದಿದ್ದರು. ಸರ್ಕಾರದೊಂದಿಗೆ ಮೈತ್ರಿ ಸಾಧ್ಯತೆಯ ವಿಚಾರ ಪರಿಶೀಲಿಸಲು ಬಯಸಿದ 51 ಶಾಸಕರಲ್ಲಿ ಜಯಂತ್ ಪಾಟೀಲ್ ಕೂಡ ಇದ್ದರು. ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಹಾಜರಿರಲಿಲ್ಲ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.