ADVERTISEMENT

Maharashtra | ಬಿಜೆಪಿಗೆ ‘ಮಹಾ’ ಸಿ.ಎಂ ಪಟ್ಟ

ಸಿ.ಎಂ: ಮೋದಿ, ಶಾ ನಿರ್ಧಾರಕ್ಕೆ ಬದ್ಧ –ಶಿಂದೆ * ನ.30 ಅಥವಾ ಡಿ.1ರಂದು ಪ್ರಮಾಣ–ಪವಾರ್

​ಪ್ರಜಾವಾಣಿ ವಾರ್ತೆ
ಪಿಟಿಐ
Published 28 ನವೆಂಬರ್ 2024, 0:02 IST
Last Updated 28 ನವೆಂಬರ್ 2024, 0:02 IST
ಏಕನಾಥ ಶಿಂದೆ
ಏಕನಾಥ ಶಿಂದೆ   

ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಪಟ್ಟ ಬಿಜೆಪಿ ಪಾಲಾಗುವುದು ಬಹುತೇಕ ಖಚಿತವಾಗಿದೆ.

ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌, ಶಿವಸೇನಾದ ಏಕನಾಥ ಶಿಂದೆ ಹಾಗೂ ಎನ್‌ಸಿಪಿಯ ಅಜಿತ್‌ ಪವಾರ್‌ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಗುರುವಾರ ಭೇಟಿ ಮಾಡಲಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದೆ.

ಒಬ್ಬರು ಮುಖ್ಯಮಂತ್ರಿ ಹಾಗೂ ಇಬ್ಬರು ಉಪಮುಖ್ಯಮಂತ್ರಿ ಸೂತ್ರದಡಿ ಅಧಿಕಾರ ಹಂಚಿಕೆಯಾಗುವ ನಿರೀಕ್ಷೆ ಇದೆ.

ADVERTISEMENT

ಇನ್ನೊಂದೆಡೆ, ‘ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭ ನವೆಂಬರ್ 30 ಅಥವಾ ಡಿಸೆಂಬರ್‌ 1ರಂದು ನಡೆಯುವ ಸಾಧ್ಯತೆ ಇದೆ’ ಎಂದಜು ಅಜಿತ್‌ ಪವಾರ್‌ ಬುಧವಾರ ಹೇಳಿದ್ದಾರೆ.

ಅಡ್ಡಿ ನಿವಾರಣೆ:

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ‘ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ’ ಎಂದು ಶಿವಸೇನಾ ಮುಖ್ಯಸ್ಥ ಏಕನಾಥ ಶಿಂದೆ ಘೋಷಿಸಿದ್ದಾರೆ. 

ಈ ಬೆಳವಣಿಗೆಯಿಂದಾಗಿ, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಇದ್ದ ಅಡ್ಡಿಗಳು ನಿವಾರಣೆಯಾದಂತಾಗಿವೆ. ಶಿಂದೆ ಅವರು ಸದ್ಯ ಉಸ್ತುವಾರಿ ಮುಖ್ಯಮಂತ್ರಿಯಾಗಿದ್ಧಾರೆ.

ಠಾಣೆಯಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಶಿಂದೆ, ‘ನಾನು ಮೋದಿ ಹಾಗೂ ಅಮಿತ್‌ ಶಾ ಅವರೊಂದಿಗೆ ಮಂಗಳವಾರ ಮಾತನಾಡಿ, ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವಾಗಿ ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂಬುದಾಗಿ ತಿಳಿಸಿದೆ’ ಎಂದು ಹೇಳಿದರು. 

‘ನಾನು ಬೇಸರಗೊಂಡಿಲ್ಲ. ನನಗೆ ನಿರಾಸೆಯೂ ಆಗಿಲ್ಲ. ನಾವು ಹೋರಾಟಗಾರರೇ ಹೊರತು ಅಳುತ್ತಾ ಕೂರುವವರಲ್ಲ. ಈ ಗೆಲುವಿಗಾಗಿ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದೇವೆ’ ಎಂದರು.

‘ಸಿ.ಎಂ ಎಂದರೆ ‘ಕಾಮನ್‌ ಮ್ಯಾನ್’ (ಸಾಮಾನ್ಯ ವ್ಯಕ್ತಿ) ಎಂಬ ಅರ್ಥವೂ ಇದೆ. ಸಾಮಾನ್ಯ ಜನರ ಏಳಿಗೆಗಾಗಿ ರಕ್ತದ ಕೊನೆ ಹನಿ ಇರುವವರೆಗೂ ನಾನು ದುಡಿಯುತ್ತೇನೆ’ ಎಂದರು.

‘ನೀವು ಉಪಮುಖ್ಯಮಂತ್ರಿಯಾಗಲು ಒಪ್ಪುವಿರಾ? ನೀವು ರಾಜ್ಯ ರಾಜಕಾರಣದಲ್ಲಿಯೇ ಇರುತ್ತೀರಾ ಇಲ್ಲವೇ ಕೇಂದ್ರ ಸಂಪುಟ ಸೇರುವಿರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸದ ಅವರು, ‘ನಾಳೆ, ಶಾ ಅವರೊಂದಿಗೆ ಸಭೆ ಇದೆ’ ಎಂದಷ್ಟೆ ಹೇಳಿದರು.

ಏಕನಾಥ ಶಿಂದೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಶಿವಸೇನಾ (ಶಿಂದೆ) ಕಾರ್ಯಕರ್ತರು ರಾಜ್ಯದ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಿದ್ದರು. ‘ಏಕನಾಥ ಹೈ ತೋ ಸೇಫ್‌ ಹೈ’ ಎಂಬ ಘೋಷಣೆಗಳನ್ನು ಕೂಗಿದ್ದರು. ಇದು, ಶಿಂದೆ ಅವರೇ ಮುಂದಿನ ಮುಖ್ಯಮಂತ್ರಿ ಎಂಬಂತೆ ಬಿಂಬಿಸುವ ಪ್ರಯತ್ನ ಎಂದೇ ಅರ್ಥೈಸಲಾಗಿತ್ತು. ಆದರೆ, ಈ ಬೆಳವಣಿಗೆ ಬೆನ್ನಲ್ಲೇ, ಶಿಂದೆ ಅವರು ಸುದ್ದಿಗೋಷ್ಠಿ ನಡೆಸಿ ತಮ್ಮ ನಿಲುವನ್ನು ಸ್ಪಷ್ಪಪಡಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರ ಹೆಸರು ಮುಂಚೂಣಿಯಲ್ಲಿದೆ. ಬಿಜೆಪಿಗೆ ಪ್ರಚಂಡ ಗೆಲುವು ಸಿಕ್ಕ ನಂತರ, ಪಕ್ಷದ ರಾಜ್ಯ ಘಟಕ ಕೂಡ ಫಡಣವೀಸ್‌ ಬೆಂಬಲಕ್ಕೆ ನಿಂತಿದೆ.

ಪ್ರಮುಖ ಅಂಶಗಳು

* ಶಿಂದೆ ನಿರ್ಧಾರವನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್ ಬಾವಂಕುಲೆ ಹಾಗೂ ನಾಯಕ ಸುಧೀರ್‌ ಮುಂಗಂಟಿವಾರ್ ಸ್ವಾಗತಿಸಿದ್ದಾರೆ

* ನೂತನ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗುವುದಕ್ಕೆ ಶಿಂದೆ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ

* ಹೊಸ ಸರ್ಕಾರ ರಚನೆ ಕುರಿತ ಪ್ರಕ್ರಿಯೆಗಳನ್ನು ದೆಹಲಿಯಲ್ಲಿ ಗುರುವಾರ ಅಂತಿಮಗೊಳಿಸಲಾಗುವುದು 

ಮುಂದಿನ ಮುಖ್ಯಮಂತ್ರಿ ಕುರಿತು ಬಿಜೆಪಿಯ ನಿರ್ಧಾರಕ್ಕೆ ಶಿವಸೇನಾ ಸಂಪೂರ್ಣ ಬೆಂಬಲ ನೀಡಲಿದೆ. ನಮ್ಮಿಂದ ‘ಸ್ಪೀಡ್‌ ಬ್ರೇಕರ್’ ಇರುವುದಿಲ್ಲ
ಏಕನಾಥ ಶಿಂದೆ ಮಹಾರಾಷ್ಟ್ರದ ಉಸ್ತವಾರಿ ಮುಖ್ಯಮಂತ್ರಿ
ಸಿ.ಎಂ ಅಭ್ಯರ್ಥಿ ವಿಚಾರವಾಗಿ ಸೃಷ್ಟಿಯಾಗಿದ್ದ ಊಹಾಪೋಹಗಳಿಗೆ ಶಿಂದೆ ತೆರೆ ಎಳೆದಿದ್ದಾರೆ. ಈ ಕುರಿತು ಎನ್‌ಡಿಎ ನಾಯಕರು ತೀರ್ಮಾನ ತೆಗೆದುಕೊಳ್ಳುವರು
ದೇವೇಂದ್ರ ಫಡಣವೀಸ್ ಬಿಜೆಪಿ ನಾಯಕ

ಶಿವಸೇನಾ ಸಂಸದರಿಂದ ಶಾ ಭೇಟಿ

ನವದೆಹಲಿ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ವಿಚಾರದಲ್ಲಿ ಬಿಜೆಪಿ ನಿರ್ಧಾರಕ್ಕೆ ಬೆಂಬಲಿಸುವುದಾಗಿ ಏಕನಾಥ ಶಿಂದೆ ಮುಂಬೈನಲ್ಲಿ ಘೋಷಿಸಿದರೆ ಇನ್ನೊಂದೆಡೆ ಪಕ್ಷದ ಸಂಸದರ ನಿಯೋಗ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಬುಧವಾರ ಭೇಟಿ ಮಾಡಿದೆ. ಕೇಂದ್ರ ಸಚಿವ ಪ್ರತಾಪ್‌ರಾವ್ ಜಾಧವ ಸಂಸದರಾದ ನರೇಶ್‌ ಮ್ಹಾಸ್ಕೆ ರವೀಂದ್ರ ವಾಯ್ಕರ್ ಸಾಂದೀಪನ್‌ ಭೂಮರೆ ಶ್ರೀರಂಗ ಅಪ್ಪ ಬಾರ್ನೆ ಧೈರ್ಯಶೀಲ ಮಾನೆ ರಾಜ್ಯಸಭಾ ಸದಸ್ಯರಾದ ಮಿಲಿಂದ್‌ ದೇವ್ರಾ ಮಾಜಿ ಸಂಸದ ರಾಹುಲ್‌ ಶೇವಳೆ ನಿಯೋಗದಲ್ಲಿದ್ದರು. ‘ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಬಿಜೆಪಿ ಬಹಳ ಸಹಾಯ ಮಾಡಿದೆ. ಈ ಕುರಿತು ಸಚಿವ ಅಮಿತ್‌ ಶಾ ಅವರಿಗೆ ಕೃತಜ್ಞತೆ ಸಲ್ಲಿಸಲು ಅವರನ್ನು ಭೇಟಿ ಮಾಡಿದ್ದೆವು’ ಎಂದು ಸಂಸದ ಧೈರ್ಯಶೀಲ ಮಾನೆ ನಂತರ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.