ADVERTISEMENT

ರಾಜಕೀಯ ಸಂಚಲನಕ್ಕೆ ಮಹಾರಾಷ್ಟ್ರ ಸಜ್ಜು

ಮೃತ್ಯುಂಜಯ ಬೋಸ್
Published 21 ಮೇ 2019, 19:27 IST
Last Updated 21 ಮೇ 2019, 19:27 IST
ಪ್ರಕಾಶ್ ಅಂಬೇಡ್ಕರ್‌
ಪ್ರಕಾಶ್ ಅಂಬೇಡ್ಕರ್‌   

ಮುಂಬೈ: 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಏನೇ ಬರಲಿ, ಮಹಾರಾಷ್ಟ್ರದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಸಂಚಲನ ಉಂಟಾಗಲಿದೆ.

ಲೋಕಸಭೆ ಚುನಾವಣೆಯ ಬಳಿಕ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಅತ್ಯಂತ ದೊಡ್ಡ ರಾಜ್ಯ ಮಹಾರಾಷ್ಟ್ರ. ಹಾಗಾಗಿ, ಹೊಸ ಸಮೀಕರಣಗಳು ರೂಪುಗೊಳ್ಳಬಹುದು, ಹೊಸ ಮೈತ್ರಿಕೂಟ ರಚನೆಯಾಗಬಹುದು ಮತ್ತು ಹಳೆಯ ಮೈತ್ರಿಕೂಟದಲ್ಲಿ ಬಿರುಕು ಕೂಡ ಮೂಡಬಹುದು.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ನಡೆಯಲಿದೆ. ಅದರೊಂದಿಗೆ ರಾಜ್ಯದಲ್ಲಿ ಚುನಾವಣಾ ವಾತಾವರಣ ಸೃಷ್ಟಿಯಾಗಬಹುದು.

ADVERTISEMENT

ಈಗ ಆಡಳಿತದಲ್ಲಿರುವ ಬಿಜೆಪಿ–ಶಿವಸೇನಾ ನೇತೃತ್ವದ ಮೈತ್ರಿಕೂಟ ಮತ್ತು ಕಾಂಗ್ರೆಸ್‌–ಎನ್‌ಸಿಪಿ ನೇತೃತ್ವದ ಮೈತ್ರಿಕೂಟಗಳ ನಡುವೆ ನೇರ ಹಣಾಹಣೆ ನಡೆಯಲಿದೆ. ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಮತ್ತು ಪ್ರಕಾಶ್‌ ಅಂಬೇಡ್ಕರ್‌ ನೇತೃತ್ವದ ವಂಚಿತ್‌ ಬಹುಜನ ಅಘಾಡಿ (ವಿಬಿಎ) ಯಾವ ಗುಂಪು ಸೇರಬಹುದು ಎಂಬ ಕುತೂಹಲವೂ ಈ ಬಾರಿ ಇದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್‌ ಠಾಕ್ರೆ ಅವರು ಮಹಾರಾಷ್ಟ್ರದಾದ್ಯಂತ ಸಮಾವೇಶಗಳನ್ನು ನಡೆಸಿ ‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಮನೆಗೆ ಕಳುಹಿಸಿ’ ಎಂದು ಜನರಿಗೆ ಕರೆ ಕೊಟ್ಟಿದ್ದರು. ಇವರನ್ನು ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಬೇಕು ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಬಯಸಿದ್ದರು. ಮಾತುಗಾರಿಕೆ ಮೂಲಕ ಜನರನ್ನು ಆಕರ್ಷಿಸುವ ರಾಜ್‌ ಅವರ ಉತ್ತರ ಭಾರತ ವಿರೋಧಿ ನಿಲುವು ಕಾಂಗ್ರೆಸ್‌ಗೆ ತೊಡಕಾಗಿ ಕಾಡಿದೆ. ರಾಜ್‌ ಅವರನ್ನು ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್‌ ಇನ್ನೂ ಸ್ಪಷ್ಟ ನಿರ್ಧಾರ ತಳೆದಿಲ್ಲ.

ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಅವರು ದಲಿತ, ಮುಸ್ಲಿಂ ಮತ್ತು ಬುಡಕಟ್ಟು ಸಮುದಾಯಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಎಐಎಂಐಎಂನ ಅಸಾದುದ್ದೀನ್‌ ಒವೈಸಿ ಮತ್ತು ಪ್ರಕಾಶ್‌ ಅವರು ಜತೆಗೂಡಿ ಕಾಂಗ್ರೆಸ್‌ನ ದಲಿತ–ಮುಸ್ಲಿಂ ಮತಬ್ಯಾಂಕ್‌ಗೆ ಕನ್ನ ಹಾಕಿದ್ದಾರೆ ಎಂಬುದು ಈ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಂದ ವಿಶ್ಲೇಷಣೆಗಳ ತಿರುಳು. ಧನ್‌ಗಾರ್‌ ಸಮುದಾಯವು ಈವರೆಗೆ ಬಿಜೆಪಿಯನ್ನು ಬೆಂಬಲಿಸುತ್ತಿತ್ತು. ಈಗ ಈ ಸಮುದಾಯ ವಿಬಿಎ ಜತೆಗಿದೆ ಎನ್ನಲಾಗುತ್ತಿದೆ.

ರಾಜ್‌ ಮತ್ತು ಪ್ರಕಾಶ್‌ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಪ್ರಕಾಶ್‌ ಅಕೋಲ್ಕರ್‌ ಹೇಳುತ್ತಾರೆ.

ಬಿಜೆಪಿ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಾರಾಯಣ ರಾಣೆ ಅವರು ಕೊಂಕಣ ಪ್ರದೇಶದಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು. ಆದರೆ, ಬಿಜೆಪಿ–ಶಿವಸೇನಾ ಮೈತ್ರಿಕೂಟದ ಸ್ಥಾನ ಹಂಚಿಕೆ ಘೋಷಣೆಯಾದ ಕೂಡಲೇ ಅವರು ಬಿಜೆಪಿ ಜತೆಗೆ ಮುನಿಸಿಕೊಂಡಿದ್ದಾರೆ. ಐದು ವರ್ಷ ಸತತವಾಗಿ ನರೇಂದ್ರ ಮೋದಿ ಅವರನ್ನು ಶಿವಸೇನಾ ಟೀಕಿಸುತ್ತಲೇ ಬಂದಿತ್ತು. ಹಾಗಿದ್ದರೂ ಮತ್ತೆ ಮೈತ್ರಿ ಮಾಡಿಕೊಂಡದ್ದಕ್ಕೂ ಟೀಕೆಗಳು ವ್ಯಕ್ತವಾಗಿದ್ದವು. ಮೈತ್ರಿ ಯಾಕೆ ಮಾಡಿಕೊಳ್ಳಬೇಕಾಯಿತು ಎಂಬುದನ್ನು ಪ್ರತಿ ರ‍್ಯಾಲಿಯಲ್ಲಿಯೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ವಿವರಿಸಬೇಕಾದ ಸ್ಥಿತಿ ನಿರ್ಮಾಣ ಆಗಿತ್ತು.

ಬರದ ಬವಣೆ

ರಾಜ್ಯದ ಅರ್ಧ ಭಾಗದಲ್ಲಿ ಭಾರಿ ಬರಗಾಲ ಇದೆ. ವಿದರ್ಭ ಮತ್ತು ಮರಾಠವಾಡ ಪ್ರದೇಶಗಳು ಕ್ಷಾಮದಿಂದ ತತ್ತರಿಸಿವೆ. 1972ರ ಭೀಕರ ಬರಗಾಲಕ್ಕಿಂತಲೂ ಈಗಿನ ಬರದ ತೀವ್ರತೆ ಹೆಚ್ಚು ಎಂದೇ ಹೇಳಲಾಗುತ್ತಿದೆ. ಹಾಗಾಗಿ, ಬರಗಾಲ, ಕೃಷಿ ಸಂಕಷ್ಟ, ರೈತರ ಆತ್ಮಹತ್ಯೆ ಚುನಾವಣೆಯ ಮುಖ್ಯ ವಿಚಾರಗಳಾಗಬಹುದು. ದೇವೇಂದ್ರ ಫಡಣವೀಸ್‌ ನೇತೃತ್ವದ ಬಿಜೆಪಿ–ಶಿವಸೇನಾ ಮೈತ್ರಿಕೂಟದ ಸರ್ಕಾರಕ್ಕೆ ಇದುವೇ ದೊಡ್ಡ ಸವಾಲಾಗಬಹುದು.

ಕಾಂಗ್ರೆಸ್‌–ಎನ್‌ಸಿಪಿಗೆ ಏಟು

ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಕಾಂಗ್ರೆಸ್‌ನ ರಾಧಾಕೃಷ್ಣ ವಿಖೆ ಪಾಟೀಲ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಅವರ ಮಗ ಸುಜಯ್‌ ವಿಖೆ ಪಾಟೀಲ್‌ ಅವರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಎನ್‌ಸಿಪಿ ಸಂಸದ ವಿಜಯಸಿಂಹ ಮೋಹಿತೆ ಪಾಟೀಲ್‌ ಅವರು ಹಿಂದೆ ಉಪಮುಖ್ಯಮಂತ್ರಿ ಆಗಿದ್ದವರು. ಅವರ ಮಗ ರಂಜಿತ್‌ಸಿಂಹ ಮೋಹಿತೆ ಪಾಟೀಲ್‌ ಅವರು ಬಿಜೆಪಿಯಲ್ಲಿದ್ದಾರೆ. ಲೋಕಸಭೆ ಚುನಾವಣೆಯ ಬಳಿಕ ರಾಧಾಕೃಷ್ಣ ಮತ್ತು ವಿಜಯಸಿಂಹ ಅವರೂ ಬಿಜೆಪಿ ಸೇರುವುದು ಖಚಿತ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.