ADVERTISEMENT

Maharashtra Politics | ಪುಟಿದೆದ್ದು ಬಂದ ದೇವೇಂದ್ರ ಫಡಣವೀಸ್

ಮೃತ್ಯುಂಜಯ ಬೋಸ್
Published 4 ಡಿಸೆಂಬರ್ 2024, 23:30 IST
Last Updated 4 ಡಿಸೆಂಬರ್ 2024, 23:30 IST
ದೇವೇಂದ್ರ ಫಡಣವೀಸ್
ದೇವೇಂದ್ರ ಫಡಣವೀಸ್   

ಮುಂಬೈ: ದೇವೇಂದ್ರ ಫಡಣವೀಸ್ ಅವರನ್ನು ಪಕ್ಷದ ಒಳಗಿನ ಹಾಗೂ ಹೊರಗಿನ ವಿರೋಧಿಗಳು ಏಕಾಂಗಿಯಾಗಿಸಿದ್ದರು. ರಾಜಕೀಯ ಪಂಡಿತರು ‘ಫಡಣವೀಸ್ ಅವರ ರಾಜಕೀಯ ಮುಗಿಯಿತು’ ಎಂದು ಷರಾ ಬರೆದಾಗಿತ್ತು. ಆದರೆ, ಫಡಣವೀಸ್ ಅವರು ಮತ್ತೆ ಅಧಿಕಾರದ ಕೇಂದ್ರಕ್ಕೆ ಮರಳಿದ್ದಾರೆ. ಒಂದು ದಶಕದ ಅವಧಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅವರು ಮೂರನೆಯ ಬಾರಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯ ಕಚೇರಿ ಇರುವ ನಾಗ್ಪುರದ ಫಡಣವೀಸ್ ಅವರು ಮಹಾರಾಷ್ಟ್ರ ರಾಜಕಾರಣದಲ್ಲಿ ಹಲವು ಸಂಪ್ರದಾಯಗಳನ್ನು, ಪರಂಪರೆಗಳನ್ನು ಮುರಿದು ಬಂದವರು. ಮುಖ್ಯಮಂತ್ರಿ ಯಾಗಿ ಮೊದಲ ಐದು ವರ್ಷಗಳ ಆಡಳಿತದಲ್ಲಿ ಫಡಣವೀಸ್ ಅವರು, ಹಿರಿಯ ನಾಯಕರ ನಡುವಿನ ‘ಹೊಂದಾಣಿಕೆ ರಾಜಕೀಯ’ವನ್ನು ಮೂಲೆಗೆ ತಳ್ಳಿದ್ದರು.

ಜಾತಿ ಲೆಕ್ಕಾಚಾರದ ಪ್ರಭಾವ ಜೋರಾಗಿರುವ ಮಹಾರಾಷ್ಟ್ರ ರಾಜಕಾರಣದಲ್ಲಿ, ಶರದ್ ಪವಾರ್ ಅವರು ಐದು ದಶಕಗಳಿಂದ ಹೊಂದಿದ್ದ ಪ್ರಾಬಲ್ಯಕ್ಕೆ ಸವಾಲು ಒಡ್ಡಿದ್ದು ಮಾಜಿ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಅವರ ನಂತರ ಫಡಣವೀಸ್ ಅವರೇ ಇರಬೇಕು. ಸಂಖ್ಯೆಯ ದೃಷ್ಟಿಯಿಂದ ನಗಣ್ಯ
ವಾಗಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಫಡಣವೀಸ್ ಅವರು, ಮರಾಠ ಮೀಸಲಾತಿ ಹೋರಾಟ ಜೋರಾಗಿದ್ದರೂ, ಅದರ ಪ್ರಭಾವಕ್ಕೆ ಎದುರಾಗಿ ನಿಲ್ಲುವ ರಾಜಕೀಯ
ಚಾಕಚಕ್ಯತೆಯನ್ನು ತೋರಿಸಿದರು.

ADVERTISEMENT

ಎರಡನೆಯ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ನಂತರ ಫಡಣವೀಸ್ ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಆಗುವ ಅವಕಾಶ ಕಳೆದುಕೊಂಡರು. ಅದುವರೆಗೆ ಬಿಜೆಪಿಯ ಮಿತ್ರಪಕ್ಷ ಆಗಿದ್ದ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸಿತು. ಆದರೆ, ನಂತರದಲ್ಲಿ ಶಿವಸೇನಾ ಪಕ್ಷವು ಹೋಳಾಗುವಂತೆ ಬಿಜೆಪಿ ತಂತ್ರಗಾರಿಕೆ ನಡೆಸಿದಾಗ, ಏಕನಾಥ ಶಿಂದೆ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಫಡಣವೀಸ್ ಅವರು ಉಪಮುಖ್ಯಮಂತ್ರಿ ಹುದ್ದೆಗೆ ಸಮಾಧಾನ ಪಟ್ಟುಕೊಳ್ಳಬೇಕಾಯಿತು.

ತಮಗೆ ಒಳ್ಳೆಯ ಅವಕಾಶ ಸಿಗಬಹುದು ಎಂದು ತಾಳ್ಮೆಯಿಂದ ಕಾದಿದ್ದ ಫಡಣವೀಸ್, ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭಾರಿ ಹಿನ್ನಡೆ ಅನುಭವಿಸಬೇಕಾಯಿತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸಂಖ್ಯಾಬಲವು ಮಹಾರಾಷ್ಟ್ರದಲ್ಲಿ ಒಂದಂಕಿಗೆ ಕುಸಿಯಿತು.

ಆಗ ಆರ್‌ಎಸ್‌ಎಸ್‌ ಜೊತೆ ಸಮನ್ವಯ ಸಾಧಿಸಿ ಫಡಣವೀಸ್ ಅವರು ಹೊಸ ಬಗೆಯಲ್ಲಿ
ಚುನಾವಣಾ ಪ್ರಚಾರ ಆರಂಭಿಸಬೇಕಾಯಿತು.

ಮಹಾರಾಷ್ಟ್ರ ಚುನಾವಣೆಯಲ್ಲಿ ಸಾಮಾನ್ಯವಾಗಿ, ಫಡಣವೀಸ್ ಅವರ ತಂಡವು ಆರ್‌ಎಸ್‌ಎಸ್‌ ಜೊತೆ ಸಮನ್ವಯ ಸಾಧಿಸಿ ಪ್ರಚಾರ ಅಭಿಯಾನ ನಡೆಸುತ್ತದೆ.

ಆದರೆ, ಭಾರಿ ಸೋಲು ಕಂಡ ಐದೇ ತಿಂಗಳುಗಳಲ್ಲಿ ಫಡಣವೀಸ್ ಅವರು ಮತ್ತೆ ಪುಟಿದೆದ್ದಿದ್ದಾರೆ. ಹೊಸ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತಕ್ಕೆ 10 ಸ್ಥಾನಗಳಷ್ಟೇ ಕಡಿಮೆ. ಹೀಗಾಗಿ, ಫಡಣವೀಸ್ ಅವರ ಸ್ನೇಹಿತರಿಗೆ ಹಾಗೂ ಶತ್ರುಗಳಿಗೆ, ಅವರನ್ನೇ ಮುಖ್ಯಮಂತ್ರಿಯನ್ನಾಗಿ ಒಪ್ಪಿಕೊಳ್ಳದೆ ಬೇರೆ ಆಯ್ಕೆ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.