ADVERTISEMENT

ಶರದ್ ಪವಾರ್‌ರನ್ನು ಅರ್ಥ ಮಾಡಿಕೊಳ್ಳಲು 100 ಬಾರಿ ಹುಟ್ಟಿಬರಬೇಕು: ಸಂಜಯ್ ರಾವತ್

ಏಜೆನ್ಸೀಸ್
Published 19 ನವೆಂಬರ್ 2019, 13:04 IST
Last Updated 19 ನವೆಂಬರ್ 2019, 13:04 IST
ಸಂಜಯ್ ರಾವತ್
ಸಂಜಯ್ ರಾವತ್   

ಮುಂಬೈ:ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ವರಿಷ್ಠ ಶರದ್ ಪವಾರ್ ಅವರನ್ನು ಅರ್ಥ ಮಾಡಿಕೊಳ್ಳಬೇಕಾದರೆ 100 ಬಾರಿ ಹುಟ್ಟಿಬರಬೇಕು ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ಮಂಗಳವಾರ ಹೇಳಿದ್ದಾರೆ.

ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಸೇರಿ ಮಹಾರಾಷ್ಟ್ರ ಸರ್ಕಾರ ರಚಿಲಿವೆ ಎಂದು ಈ ಹಿಂದೆ ಹೇಳಿದ್ದ ಪವಾರ್, ಶಿವಸೇನಾ–ಬಿಜೆಪಿ ಅವರ ಹಾದಿ ನೋಡಿಕೊಳ್ಳಲಿದೆ ಎಂದು ಸೋಮವಾರ ಹೇಳಿದ್ದರು. ಜತೆಗೆ ಸರ್ಕಾರ ರಚನೆ ಬಗ್ಗೆ ಇನ್ನಷ್ಟು ಮಾತುಕತೆ ಅಗತ್ಯ ಎಂದು ಹೇಳಿದ್ದರು. ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ರಾವತ್ ಮೇಲಿನ ಹೇಳಿಕೆ ನೀಡಿದ್ದಾರೆ.

‘ಪವಾರ್ ಮತ್ತು ನಮ್ಮ ಮೈತ್ರಿ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ಶೀಘ್ರದಲ್ಲೇ, ಡಿಸೆಂಬರ್ ವೇಳೆಗೆ ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಅದು ಸ್ಥಿರ ಸರ್ಕಾರವಾಗಿರಲಿದೆ’ ಎಂದು ರಾವತ್ ಹೇಳಿದ್ದಾರೆ.

ಶಿವಸೇನಾ ಸರ್ಕಾರ ರಚಿಸುವುದರಲ್ಲಿ ಸಂಶಯವೇ ಇಲ್ಲ. ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ ಎಂದೂ ಅವರು ಹೇಳಿದ್ದಾರೆ.

ಎನ್‌ಸಿಪಿಯನ್ನು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹೊಗಳಿದ್ದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪವಾರ್ ಅವರನ್ನು ಮೋದಿ ಹೊಗಳಿದ್ದರಲ್ಲಿ ತಪ್ಪೇನಿದೆ? ಹಿಂದೆ, ಪವಾರ್ ತಮ್ಮ ರಾಜಕೀಯ ಗುರು ಎಂದು ಬಹಿರಂಗವಾಗಿ ಮೋದಿ ಒಪ್ಪಿಕೊಂಡಿದ್ದರು. ಹೀಗಾಗಿ ಈ ವಿಚಾರವನ್ನು ರಾಜಕೀಯವಾಗಿ ನೋಡಬೇಡಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.