ADVERTISEMENT

ಮಹಾರಾಷ್ಟ್ರ ರಾಜಕಾರಣ | ಮೈತ್ರಿಗೆ ಸೋನಿಯಾ ಗಾಂಧಿ ಅಸ್ತು?

ಎನ್‌ಸಿಪಿ – ಕಾಂಗ್ರೆಸ್‌ ಮುಖಂಡರ ಸಭೆ: ಶಿವಸೇನಾ ನೇತೃತ್ವದ ಸರ್ಕಾರ ರಚನೆ ಪ್ರಕ್ರಿಯೆ ಚುರುಕು

ಪಿಟಿಐ
Published 20 ನವೆಂಬರ್ 2019, 20:00 IST
Last Updated 20 ನವೆಂಬರ್ 2019, 20:00 IST
ಶರದ್‌ ಪವಾರ್‌ ಅವರ ದೆಹಲಿಯ ನಿವಾಸದಲ್ಲಿ ಕಾಂಗ್ರೆಸ್‌– ಎನ್‌ಸಿಪಿ ನಾಯಕರ ಸಭೆ ಬುಧವಾರ ಸಂಜೆ ನಡೆಯಿತು             –ಪಿಟಿಐ ಚಿತ್ರ
ಶರದ್‌ ಪವಾರ್‌ ಅವರ ದೆಹಲಿಯ ನಿವಾಸದಲ್ಲಿ ಕಾಂಗ್ರೆಸ್‌– ಎನ್‌ಸಿಪಿ ನಾಯಕರ ಸಭೆ ಬುಧವಾರ ಸಂಜೆ ನಡೆಯಿತು  –ಪಿಟಿಐ ಚಿತ್ರ   

ನವದೆಹಲಿ: ಶಿವಸೇನಾಕ್ಕೆ ಬೆಂಬಲ ನೀಡಿ ಸರ್ಕಾರ ರಚಿಸಲು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಬುಧವಾರ ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ಚುರುಕುಗೊಂಡಿದೆ.

ಕಾಂಗ್ರೆಸ್‌ ನಾಯಕರು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಮತ್ತು ಶಿವಸೇನಾದ ನಾಯಕರ ಜೊತೆ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿದ್ದಾರೆ. ಸಂಜೆ, ಶರದ್‌ ಪವಾರ್‌ ಅವರ ನಿವಾಸದಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ನಾಯಕರ ಸಭೆ ನಡೆದಿದೆ. ಇಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ನ ಅಹ್ಮದ್‌ ಪಟೇಲ್‌, ಜೈರಾಮ್‌ ರಮೇಶ್‌, ಮಲ್ಲಿಕಾರ್ಜುನ ಖರ್ಗೆ, ಪೃಥ್ವಿರಾಜ್‌ ಚವಾಣ್‌, ಕೆ.ಸಿ.
ವೇಣುಗೋಪಾಲ್‌ ಹಾಗೂ ಬಾಳಾ ಸಾಹೇಬ್‌ ಥೋರಟ್‌, ಎನ್‌ಸಿಪಿಯ ಶರದ್‌ ಪವಾರ್‌, ಸುಪ್ರಿಯಾ ಸುಳೆ, ಅಜಿತ್‌ ಪವಾರ್‌, ಜಯಂತ ಪಾಟೀಲ್ ಹಾಗೂ ನವಾಬ್‌ ಮಲಿಕ್‌ ಅವರು ಸಭೆಯಲ್ಲಿದ್ದರು.

ADVERTISEMENT

ಹಿಂದುತ್ವವನ್ನು ಪ್ರತಿಪಾದಿಸುವ ಮತ್ತು ಸೈದ್ಧಾಂತಿಕವಾಗಿ ಕಾಂಗ್ರೆಸ್‌ಗಿಂತ ಭಿನ್ನವಾದ ಶಿವಸೇನಾದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಇಚ್ಛೆ ಸೋನಿಯಾಗೆ ಇರಲಿಲ್ಲ ಎನ್ನಲಾಗಿದೆ.

ಶಿವಸೇನಾದ ಮುಖಂಡ ಸಂಜಯ್‌ ರಾವುತ್‌ ಅವರು ಶರದ್‌ ಪವಾರ್‌ ಅವರ ಮನೆಯ ಆವರಣದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಅಶ್ವಿನಿ ಕುಮಾರ್‌ ಅವರ ಜೊತೆ ಮಾತುಕತೆ ನಡೆಸುತ್ತಿದ್ದರು. ಇದರಿಂದಾಗಿ, ಸರ್ಕಾರ ರಚನೆಯ ಚಟುವಟಿಕೆ ಬಿರುಸುಗೊಂಡಿದೆ ಎಂಬ ಸೂಚನೆ ಲಭಿಸಿದೆ.

ಸರ್ಕಾರ ರಚನೆಯ ವಿಚಾರದಲ್ಲಿ ಕಾಂಗ್ರೆಸ್‌ ವಿಳಂಬ ಧೋರಣೆ ಅನುಸರಿಸಿರುವುದರಿಂದ ಶರದ್‌ ಪವಾರ್‌ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಮಾಡಿ ಸುಮಾರು 45 ನಿಮಿಷಗಳ
ಕಾಲ ಮಾತುಕತೆ ನಡೆಸಿದ್ದಾರೆ. ‘ತೀರ್ಮಾನ ಕೈಗೊಳ್ಳುವುದರಲ್ಲಿ ಕಾಂಗ್ರೆಸ್‌ ವಿಳಂಬ ಮಾಡಿದರೆ ನಾವು ಪರ್ಯಾಯ ಹಾದಿ ಹಿಡಿಯುತ್ತೇವೆ’ ಎಂಬ ಸಂದೇಶವನ್ನು ಈ ಮೂಲಕ ಪವಾರ್‌ ಅವರು ಕಾಂಗ್ರೆಸ್‌ಗೆ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಿವಸೇನಾ ಮುಖಂಡ ಸಂಜಯ್‌ ರಾವುತ್‌, ‘ಶಿವಸೇನಾ ನೇತೃತ್ವದಲ್ಲೇ ಮುಂದಿನ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗಲಿದೆ’ ಎಂದು ಪುನರುಚ್ಚರಿಸಿದರು.

‘ನಾವು ಸರ್ಕಾರ ರಚನೆಯತ್ತ ಹೆಜ್ಜೆ ಇಡುತ್ತಿದ್ದೇವೆ. ಮುಂದಿನ ಎರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಮೂಡಲಿದೆ’ ಎಂದು ರಾವುತ್‌ ಹೇಳಿದರು.

ಕಾಂಗ್ರೆಸ್‌– ಎನ್‌ಸಿಪಿ ನಾಯಕರು ಸಭೆ ನಡೆಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಎರಡೂ ಪಕ್ಷಗಳು ಚರ್ಚೆಯನ್ನು ಬಹುತೇಕ ಮುಗಿಸಿವೆ. ಇನ್ನು ಮುಂದೆ ಅಂಥ ಸಭೆಗಳನ್ನು ನಡೆಸುವ ಅಗತ್ಯ ಬರಲಾರದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.