ADVERTISEMENT

ಮಹಾರಾಷ್ಟ್ರ: ಜೈಲುಗಳಲ್ಲಿ 12,343 ಹೆಚ್ಚುವರಿ ಕೈದಿಗಳು; ಸಿಎಂ ಫಡಣವೀಸ್‌

ಪಿಟಿಐ
Published 10 ಜುಲೈ 2025, 4:08 IST
Last Updated 10 ಜುಲೈ 2025, 4:08 IST
ದೇವೇಂದ್ರ ಫಡಣವೀಸ್‌
ದೇವೇಂದ್ರ ಫಡಣವೀಸ್‌   

ಮುಂಬೈ: ಮಹಾರಾಷ್ಟ್ರದ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತಲೂ ಹೆಚ್ಚುವರಿ ಕೈದಿಗಳಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.

ರಾಜ್ಯ ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, ಮುಂಬೈನ ಕೇಂದ್ರ ಕಾರಾಗೃಹದ ಸಾಮರ್ಥ್ಯ 999 ಆಗಿದ್ದರೂ ಮೇ ಅಂತ್ಯದ ವೇಳೆಗೆ ಅಲ್ಲಿ 3,268 ಕೈದಿಗಳಿದ್ದರು. ಇದು ಸಾಮರ್ಥ್ಯದ ಮೂರು ಪಟ್ಟು ಹೆಚ್ಚು ಎಂದು ಹೇಳಿದರು.

ರಾಜ್ಯದ ವಿವಿಧ ಕಡೆಗಳಲ್ಲಿ 60 ಜೈಲುಗಳಿದ್ದು ಅಲ್ಲಿ 39,527 ಕೈದಿಗಳಿದ್ದಾರೆ. ಆದರೆ ಈ ಜೈಲುಗಳು 27,184 ಜನರಿರುವ ಸಾಮರ್ಥ್ಯ ಹೊಂದಿವೆ. ಒಟ್ಟಾರೆ 12,343 ಹೆಚ್ಚುವರಿ ಕೈದಿಗಳು ವಿವಿಧ ಜೈಲುಗಳಲ್ಲಿ ಇದ್ದಾರೆ ಎಂದು ಹೇಳಿದರು.

ADVERTISEMENT

ಹೊಸ ಬಂಧಿಖಾನೆಗಳನ್ನು ನಿರ್ಮಿಸುವ ಮೂಲಕ ಜೈಲುಗಳ ಸಾಮರ್ಥ್ಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದ ಫಡಣವೀಸ್‌, ಸದ್ಯ ಇರುವ ಜೈಲುಗಳಿಗೆ ಹೊಸ ಬ್ಯಾರಕ್‌ಗಳನ್ನು ನಿರ್ಮಿಸುವ ಮೂಲಕ ಕೈದಿಗಳಿಗೆ ಸ್ಥಳಾವಕಾಶ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದರು.

'ಬಡ ಕೈದಿಗಳ' ಯೋಜನೆ ಅಡಿಯಲ್ಲಿ ಆರ್ಥಿಕ ದುರ್ಬಲ ವರ್ಗದ ಕೈದಿಗಳಿಗೆ ಜಾಮೀನು ಅಥವಾ ದಂಡ ಪಾವತಿಸಲು ಹಣಕಾಸು ಸಹಾಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಎನ್‌ಜಿಒಗಳು ಸಹಯೋಗದಲ್ಲಿ ಕೈದಿಗಳಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

ರಾಜ್ಯದಲ್ಲಿರುವ 39,527 ಕೈದಿಗಳ ಪೈಕಿ 6003 ಜನ ಅನಕ್ಷರಸ್ಥರಾಗಿದ್ದಾರೆ. ಇವರಲ್ಲಿ 5,067 ಮಂದಿ ವಿಚಾರಣಾಧೀನ ಕೈದಿಗಳು ಎಂದು ಫಡಣವೀಸ್‌ ಹೇಳಿದರು.

ರಾಜ್ಯ ಸರ್ಕಾರ ಮತ್ತು ಎನ್‌ಜಿಒಗಳು 18-30 ವರ್ಷ ವಯಸ್ಸಿನವರಿಗೆ ಅಗತ್ಯ ಶಿಕ್ಷಣ ಸೇವೆ ಒದಗಿಸುತ್ತಿವೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.