ADVERTISEMENT

ಗಡಿ ವಿವಾದ ಕುರಿತ 50 ವರ್ಷದ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಮಹಾರಾಷ್ಟ್ರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 16:59 IST
Last Updated 28 ಜನವರಿ 2021, 16:59 IST
ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತು ಮುಖ್ಯಮಂತ್ರಿ ಉದ್ಧವ ಠಾಕ್ರೆ
ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತು ಮುಖ್ಯಮಂತ್ರಿ ಉದ್ಧವ ಠಾಕ್ರೆ    

ಮುಂಬೈ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವು ಮತ್ತೆ ಮುನ್ನೆಲೆಗೆ ಬಂದಿರುವ ಹೊತ್ತಲ್ಲೇ 50 ವರ್ಷಗಳಷ್ಟು ಹಳೆಯ ಸಾಕ್ಷ್ಯಚಿತ್ರವನ್ನು ಮಹಾರಾಷ್ಟ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಮರಾಠಿ ಸಂಸ್ಕೃತಿಯು ಆಚರಣೆಯಲ್ಲಿದ್ದ ವಿವರಗಳನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ.

350 ನಿಮಿಷಗಳ ಮತ್ತು ಕಪ್ಪು-ಬಿಳುಪು ಅವತರಣಿಕೆ, ‘ಎ ಕೇಸ್ ಫಾರ್ ಜಸ್ಟಿಸ್’ ಎಂಬ ಸಾಕ್ಷ್ಯಚಿತ್ರವನ್ನು ಮಹಾರಾಷ್ಟ್ರ ಸರ್ಕಾರವು 50 ವರ್ಷಗಳ ಹಿಂದೆ ನಿರ್ಮಿಸಿತ್ತು. ಈ ಸಾಕ್ಷ್ಯಚಿತ್ರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಮಹಾರಾಷ್ಟ್ರದ ಡಾ. ದೀಪಕ್ ಪವಾರ್ ಅವರು ಬರೆದಿರುವ, ‘ಮಹಾರಾಷ್ಟ್ರ-ಕರ್ನಾಟಕ ಸೀಮಾವಾದ್: ಸಂಘರ್ಷ್ ಅಣಿ ಸಂಕಲ್ಪ’ ಪುಸ್ತಕವನ್ನು ಠಾಕ್ರೆ ಅವರು ಬುಧವಾರವಷ್ಟೇ ಬಿಡುಗಡೆ ಮಾಡಿದ್ದರು. ಇದಾದ ಮರುದಿನವೇ ಈ ಸಾಕ್ಷ್ಯಚಿತ್ರವನ್ನು ಡಿಜಿಟಲ್ ರೂಪದಲ್ಲಿ ಅಪ್‌ಲೋಡ್ ಮಾಡಲಾಗಿದೆ. ‘ಈ ಸಾಕ್ಷ್ಯಚಿತ್ರವು ಎಲ್ಲರಿಗೂ ಲಭ್ಯವಾಗಬೇಕು ಎಂದು ಮುಖ್ಯಮಂತ್ರಿಗಳು ಆದೇಶಿಸಿದ್ದರು’ ಎಂದು ಮೂಲಗಳು ಮಾಹಿತಿ ನೀಡಿವೆ. ಈ ಕ್ರಮವನ್ನು ಮರಾಠಿಗರು ಸ್ವಾಗತಿಸಿದ್ದಾರೆ.

ADVERTISEMENT

60 ವರ್ಷಗಳ ಹಿಂದೆ ಕಾರವಾರದ ಶಾಲೆಯಲ್ಲಿ ಶಿಕ್ಷಕರೊಬ್ಬರು ಇಂಗ್ಲಿಷ್, ಮರಾಠಿ ಮತ್ತು ಕೊಂಕಣಿಯನ್ನು ಬೋಧಿಸುತ್ತಿರುವ ದೃಶ್ಯವು ಈ ಸಾಕ್ಷ್ಯಚಿತ್ರದಲ್ಲಿದೆ. ಎನ್‌ಸಿಸಿ ಬೆಟಾಲಿಯನ್‌ನಲ್ಲಿ ಮರಾಠಿ ಫಲಕ ಬಳಕೆ, ಮರಾಠಿಯ ‘ವಿಚಾರಿ’ ದಿನಪತ್ರಿಕೆಯ ವಿವರಗಳು ಈ ಸಾಕ್ಷ್ಯಚಿತ್ರದಲ್ಲಿವೆ. 1912ರಲ್ಲಿ ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ ತನ್ನ ವಾರ್ಷಿಕ ವರದಿಯ ವಿವರಗಳು, 1890ರಲ್ಲಿ ಬೆಳಗಾವಿಯಲ್ಲಿ ನಿರ್ಮಿಸಿದ ಸೇತುವೆ ಮೇಲೆ ಮರಾಠಿಯಲ್ಲಿ ಹೆಸರು ಇರುವ ದೃಶ್ಯಗಳು ಇದರಲ್ಲಿವೆ.

ಬೆಳಗಾವಿ ಮತ್ತು ಇತರ ಗಡಿ ಪ್ರದೇಶದಲ್ಲಿನ ಜನರು ಮರಾಠಿಯಲ್ಲಿ ಮಾತನಾಡುತ್ತಿರುವುದು, ಮರಾಠಿ ಶಾಲೆಗಳಿರುವುದು, ಧಾರ್ಮಿಕ ಆಚರಣೆಗಳು ಮತ್ತು ಗೀತೆಗಳನ್ನು ಮರಾಠಿಯಲ್ಲಿ ಹಾಡುತ್ತಿರುವ ದೃಶ್ಯಗಳು ಸಾಕ್ಷ್ಯಚಿತ್ರದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.