ADVERTISEMENT

ಮನೆಗೆ ತೆರಳಿ ಲಸಿಕೆ ನೀಡುವ ಪ್ರಾಯೋಗಿಕ ಪ್ರಕ್ರಿಯೆ ಆರಂಭಿಸಿ: ಬಾಂಬೆ ಹೈಕೋರ್ಟ್‌

ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ

ಪಿಟಿಐ
Published 30 ಜೂನ್ 2021, 8:52 IST
Last Updated 30 ಜೂನ್ 2021, 8:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಅಸ್ವಸ್ಥರಾಗಿ ಹಾಸಿಗೆ ಹಿಡಿದಿರುವವರಿಗಾಗಿ ಮನೆಗಳಿಗೇ ತೆರಳಿ ಕೋವಿಡ್‌ ಲಸಿಕೆ ನೀಡುವ ಪ್ರಾಯೋಗಿಕ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಬಾಂಬೆ ಹೈಕೋರ್ಟ್‌, ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿದೆ. ಇದಕ್ಕಾಗಿ ಕೇಂದ್ರದ ಅನುಮೋದನೆಗೆ ಕಾಯಬಾರದು ಎಂದೂ ಹೇಳಿದೆ.

ಈ ಸಂಬಂಧ ಮಹಾರಾಷ್ಟ್ರ ಸರ್ಕಾರದ ಅಡ್ವೊಕೇಟ್‌ ಜನರಲ್ ಅಶುತೋಷ್‌ ಕುಂಭಕೋಣಿ ಅವರು ‘ಕೇಂದ್ರದ ಅನುಮೋದನೆಗೆ ಕಾಯದೇ, ಮನೆ ಮನೆಗೆ ತೆರಳಿ ಕೋವಿಡ್‌ ಲಸಿಕೆ ನೀಡುವ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಆರಂಭದಲ್ಲಿ, ಮನೆಯಲ್ಲೇ ಹಾಸಿಗೆ ಹಿಡಿದಿರುವವರಿಗೆ ಲಸಿಕೆ ನೀಡಲಾಗುತ್ತದೆ‘ ಎಂದು ಬುಧವಾರ ನ್ಯಾಯಾಲಯಕ್ಕೆ ತಿಳಿಸಿದರು.

‘ಮೊದಲು ಪುಣೆ ಜಿಲ್ಲೆಯಲ್ಲಿ ಮನೆಯಲ್ಲೇ ಕೋವಿಡ್‌ ಲಸಿಕೆ ನೀಡುವ ಪ್ರಾಯೋಗಿಕ ಪ್ರಕ್ರಿಯೆಯನ್ನು ಆರಂಭಿಸಿ, ಇದರಿಂದಾಗುವ ಸಾಧಕ–ಬಾಧಕವನ್ನು ಪರಿಶೀಲಿಸುತ್ತೇವೆ‘ ಎಂದು ಅವರು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠ ಪೀಠಕ್ಕೆ ತಿಳಿಸಿದರು.

ADVERTISEMENT

ಸರ್ಕಾರದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಮನೆಗೆ ತೆರಳಿ ಲಸಿಕೆ ನೀಡುವ ಪ್ರಾಯೋಗಿಕವಾಗಿ ಪ್ರಕ್ರಿಯೆ ಆರಂಭಿಸಲು ಸೂಚಿಸಿದೆ.

ಮಹಾರಾಷ್ಟ್ರ ಸರ್ಕಾರ ಮಂಗಳವಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ ‘ಮನೆಗಳಲ್ಲಿ ಲಸಿಕೆ ನೀಡಲು ಕೇಂದ್ರದಿಂದ ಅನುಮೋದನೆ ಪಡೆಯುವ ಕುರಿತು ಪ್ರಸ್ತಾಪಿಸಿದ್ದ ಅಂಶವನ್ನು ಉಲ್ಲೇಖಿಸಿದ ನ್ಯಾಯಪೀಠ, ‘ದೇಶದಲ್ಲಿ ಈಗಾಗಲೇ ಕೇರಳ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳು ಮನೆಗೆ ತೆರಳಿ ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಿವೆ. ಹೀಗಿರುವಾಗ, ಇದಕ್ಕೆ ಕೇಂದ್ರದ ಅನುಮೋದನೆಯ ಅಗತ್ಯವೇನು‘ ಎಂದು ಪ್ರಶ್ನಿಸಿತು.

ಇದೇ ವೇಳೆ ತ್ರಿಪುರಾ ರಾಜ್ಯದ ಕೆಲವು ಗುಡ್ಡಗಾಡು ಪ್ರದೇಶದಲ್ಲಿ ಕೆಲವು ನರ್ಸ್‌ಗಳು ಮತ್ತು ವೈದ್ಯರು ಮನೆಗಳಿಗೆ ತೆರಳಿ ಲಸಿಕೆ ನೀಡುತ್ತಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ನ್ಯಾಯಪೀಠ ಉಲ್ಲೇಖಿಸಿತು.

‘ಲಸಿಕೆ ಪಡೆದ ನಂತರ ಅಡ್ಡ ಪರಿಣಾಮ ಉಂಟಾದರೆ, ಅದರ ಜವಾಬ್ದಾರಿಯನ್ನು ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಕುಟುಂಬದ ಸದಸ್ಯರು ತೆಗೆದುಕೊಳ್ಳಬೇಕೆಂಬ ಲಿಖಿತ ಷರತ್ತನ್ನೊಳಗೊಂಡ ಪ್ರಮಾಣ ಪತ್ರವನ್ನು ಫಲಾನುಭವಿಯ ಕುಟುಂಬದ ಸದಸ್ಯರು ಮತ್ತು ವೈದ್ಯರಿಂದ ಪಡೆಯುತ್ತೇವೆ‘ ಎಂದು ಮಹಾರಾಷ್ಟ್ರ ಸರ್ಕಾರ ಮಂಗಳವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿತ್ತು.

ಈ ಅಂಶವನ್ನು ಪ್ರಶ್ನಿಸಿದ ನ್ಯಾಯಾಲಯ, ‘ವೈದ್ಯರಿಂದ ಪ್ರಮಾಣ ಪತ್ರ ಪಡೆಯುವುದು ಅಪ್ರಾಯೋಗಿಕ ಕ್ರಮ‘ ಎಂದು ಹೇಳಿತು. ‘ಲಸಿಕೆಯಿಂದ ಫಲಾನುಭವಿಗೆ ತೊಂದರೆಯಾದರೆ ವೈದ್ಯರು ಯಾಕೆ ಜವಾಬ್ದಾರಿ ತೆಗೆದುಕೊಳ್ಳಬೇಕು ? ಇಂಥ ಅಪ್ರಾಯೋಗಿಕ ಷರತ್ತುಗಳನ್ನು ಹೇರಬೇಡಿ‘ ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದತ್ತಾ ಹೇಳಿದರು.

ನಂತರ ಈ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿ, ರಾಜ್ಯ ಕೋವಿಡ್‌–19 ಕಾರ್ಯಪಡೆಯ ಅಧ್ಯಕ್ಷರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗುತ್ತದೆ‘ ಎಂದು ನ್ಯಾಯಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.