ADVERTISEMENT

ನಾನು ಸತ್ತರೂ ಶಿವಸೇನಾ ಬಿಡುವುದಿಲ್ಲ, ಇ.ಡಿಗೆ ಶರಣಾಗುವುದಿಲ್ಲ: ಸಂಜಯ್ ರಾವುತ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2022, 6:46 IST
Last Updated 31 ಜುಲೈ 2022, 6:46 IST
ಸಂಜಯ್ ರಾವುತ್‌
ಸಂಜಯ್ ರಾವುತ್‌   

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವುತ್‌ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇಂದು (ಭಾನುವಾರ) ಬೆಳಗ್ಗೆ 7 ಗಂಟೆ ಸುಮಾರಿಗೆ ಸಂಜಯ್ ರಾವುತ್ ಅವರ ನಿವಾಸಕ್ಕೆ ತೆರಳಿರುವ ಇ.ಡಿ ಅಧಿಕಾರಿಗಳು ಪರಿಶೀಲನೆನಡೆಸುತ್ತಿದ್ದಾರೆ.

ಇ.ಡಿ ವಿಚಾರಣೆ ಕುರಿತು ಸರಣಿ ಟ್ವೀಟ್ ಮಾಡಿರುವ ರಾವುತ್, ‘ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯ ದ್ವೇಷದಿಂದ ನನ್ನನ್ನು ಗುರಿಯಾಗಿಸಲಾಗುತ್ತಿದೆ. ಇ.ಡಿ ಅಧಿಕಾರಿಗಳು ನಡೆಸುತ್ತಿರುವ ತನಿಖೆ ಸುಳ್ಳು ಸಾಕ್ಷ್ಯವನ್ನು ಆಧರಿಸಿದೆ’ ಎಂದು ಕಿಡಿಕಾರಿದ್ದಾರೆ.

‘ನನಗೂ ಪತ್ರಾ ಚಾಲ್‌ ಭೂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ. ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡುವ ಮೂಲಕ ನಾನು ಇದನ್ನು ಹೇಳುತ್ತಿದ್ದೇನೆ. ಬಾಳಾಸಾಹೇಬರು ನಮಗೆ ಹೋರಾಟ ಮಾಡುವುದನ್ನು ಕಲಿಸಿದ್ದಾರೆ. ನಾನು ಶಿವಸೇನಾಗಾಗಿ ಹೋರಾಟ ಮುಂದುವರಿಸುತ್ತೇನೆ’ ಎಂದು ಹೇಳಿದ್ದಾರೆ.

ADVERTISEMENT

‘ನಾನು ಸತ್ತರೂ ಶಿವಸೇನಾ ಬಿಡುವುದಿಲ್ಲ. ಹಾಗೆಯೇ ಇ.ಡಿಗೂ ಶರಣಾಗುವುದಿಲ್ಲ. ಜೈ ಮಹಾರಾಷ್ಟ್ರ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ತಾವು ತಪ್ಪು ಮಾಡಿಲ್ಲದಿದ್ದರೆ ಇ.ಡಿ ವಿಚಾರಣೆಗೆ ಹಾಜರಾಗಬೇಕಿತ್ತು. ಎರಡು ಬಾರಿ ಸಮನ್ಸ್ ಜಾರಿ ಮಾಡಿದರೂ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದು ಏಕೆ? ಜಾರಿ ನಿರ್ದೇಶನಾಲಯ ಎಂದರೆ ಹೆದರಿಕೆ ಏಕೆ? ಸುದ್ದಿಗೋಷ್ಠಿ ನಡೆಸಲು ನಿಮಗೆ (ರಾವುತ್) ಸಮಯವಿದೆ. ಆದರೆ, ವಿಚಾರಣೆಗೆ ಹಾಜರಾಗಲು ಮಾತ್ರ ಸಮಯವಿಲ್ಲವೇ’ ಎಂದು ಬಿಜೆಪಿ ಶಾಸಕ ರಾಮ್ ಕದಂ ಪ್ರಶ್ನಿಸಿದ್ದಾರೆ.

ರಾವುತ್, ಅವರ ಪತ್ನಿ ಹಾಗೂ ಸ್ನೇಹಿತ ಶಾಮೀಲಾಗಿದ್ದಾರೆ ಎನ್ನಲಾದ ‘ಪತ್ರಾ ಚಾಲ್‌’ ಭೂ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅವರಿಗೆ ಜುಲೈ 20 ಮತ್ತು 27 ರಂದು ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಸಮನ್ಸ್ ನೀಡಲಾಗಿತ್ತು.

ಇ.ಡಿ ಸೂಚಿಸಿದ ದಿನಾಂಕದಂದು ರಾಜ್ಯಸಭಾ ಸಂಸದರಿಗೆ ಹಾಜರಾಗಲು ಸಾಧ್ಯವಿಲ್ಲ ಎಂದು ರಾವುತ್ ಪರವಾಗಿ ವಕೀಲರು ಲಿಖಿತ ಉತ್ತರದಲ್ಲಿ ತಿಳಿಸಿದ್ದರು. ಇ.ಡಿ ಅಧಿಕಾರಿಗಳನ್ನು ಭೇಟಿಯಾದ ವಕೀಲರು ಈ ವಿಷಯ ತಿಳಿಸಿದ್ದು, ಆಗಸ್ಟ್ ಮೊದಲ ವಾರದ ಬಳಿಕ ಸಮಯ ನೀಡುವಂತೆ ವಿನಂತಿಸಿದ್ದರು.

ಇ.ಡಿ ಸೂಚಿಸಿದ ದಿನಾಂಕದಂದು ರಾಜ್ಯಸಭಾ ಸಂಸದರಿಗೆ ಹಾಜರಾಗಲು ಸಾಧ್ಯವಿಲ್ಲ ಎಂದು ರಾವುತ್ ಪರವಾಗಿ ವಕೀಲರು ಲಿಖಿತ ಉತ್ತರದಲ್ಲಿ ತಿಳಿಸಿದ್ದರು. ಇ.ಡಿ ಅಧಿಕಾರಿಗಳನ್ನು ಭೇಟಿಯಾದ ವಕೀಲರು ಈ ವಿಷಯ ತಿಳಿಸಿದ್ದು, ಆಗಸ್ಟ್ ಮೊದಲ ವಾರದ ಬಳಿಕ ಸಮಯ ನೀಡುವಂತೆ ವಿನಂತಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.