ADVERTISEMENT

ಉಪಚುನಾವಣೆಗಳ ಫಲಿತಾಂಶ ವಿಶ್ಲೇಷಣೆ | ಪಕ್ಷಾಂತರಿಗಳಿಗೆ ಪಾಠ ಕಲಿಸಿದ ಮತದಾರ

ಕಾಂಗ್ರೆಸ್‌ ಬಿಟ್ಟು ಬಿಜೆಪಿಯಿಂದ ಸ್ಪರ್ಧಿಸಿದ್ದ ಅಲ್ಪೆಶ್‌ ಠಾಕೂರ್‌, ಧವಳಸಿಂಹ, ಉದಯನ್‌ರಾಜೆ ಭೋಸಲೆಗೆ ಸೋಲು

ಶೆಮಿಜ್‌ ಜಾಯ್‌
Published 25 ಅಕ್ಟೋಬರ್ 2019, 2:52 IST
Last Updated 25 ಅಕ್ಟೋಬರ್ 2019, 2:52 IST
ಸಾಂಗ್ಲಿಯಲ್ಲಿ ಬಿಜೆಪಿ ಕಾರ್ಯಕರ್ತರು ಗೆದ್ದ ಅಭ್ಯರ್ಥಿ ಸುಧೀರ್‌ ಗಾಡ್ಗೀಳ್‌ ಅವರನ್ನು ಹೆಗಲಮೇಲೆ ಕೂರಿಸಿಕೊಂಡು ವಿಜಯೋತ್ಸವ ಆಚರಿಸಿದರು ಪಿಟಿಐ ಚಿತ್ರ
ಸಾಂಗ್ಲಿಯಲ್ಲಿ ಬಿಜೆಪಿ ಕಾರ್ಯಕರ್ತರು ಗೆದ್ದ ಅಭ್ಯರ್ಥಿ ಸುಧೀರ್‌ ಗಾಡ್ಗೀಳ್‌ ಅವರನ್ನು ಹೆಗಲಮೇಲೆ ಕೂರಿಸಿಕೊಂಡು ವಿಜಯೋತ್ಸವ ಆಚರಿಸಿದರು ಪಿಟಿಐ ಚಿತ್ರ   

ನವದೆಹಲಿ: 18 ರಾಜ್ಯಗಳ ವಿಧಾನಸಭೆಗಳು ಮತ್ತು ಲೋಕಸಭೆಗೆ ನಡೆದ ಉಪ ಚುನಾವಣೆಯು ಸಂಭ್ರಮಿಸುವಂತಹ ಫಲಿತಾಂಶವನ್ನು ಬಿಜೆಪಿಗೆ ತಂದುಕೊಟ್ಟಿಲ್ಲ. ತನ್ನ ಭದ್ರಕೋಟೆ ಗುಜರಾತ್‌ ಮತ್ತು ಉತ್ತರ ಪ್ರದೇಶದಲ್ಲಿಯೇ ಆ ಪಕ್ಷ ಹಿನ್ನಡೆ ಕಂಡಿದೆ. ಕೆಲವೇ ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಆಘಾತ ಉಂಟಾಗಿದೆ.

ಉಪಚುನಾವಣೆ ನಡೆದ ಕ್ಷೇತ್ರಗಳ ಪೈಕಿ 20ರಲ್ಲಿ ಹಿಂದೆ ಬಿಜೆಪಿ ಸದಸ್ಯರೇ ಇದ್ದರು. ಅವುಗಳ ಪೈಕಿ 17 ಕ್ಷೇತ್ರಗಳನ್ನು ಮಾತ್ರ ಪಕ್ಷ ಉಳಿಸಿಕೊಂಡಿದೆ. ಕಾಂಗ್ರೆಸ್‌ ಪಕ್ಷವು 12 ಕ್ಷೇತ್ರಗಳಲ್ಲಿ ಗೆದ್ದಿದೆ. ಹಿಂದೆ ತಾನು ಪ್ರತಿನಿಧಿಸಿದ್ದ ಅಷ್ಟೇ ಸಂಖ್ಯೆಯ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗಿದೆ.

ಹಿಂದುಳಿದ ವರ್ಗದ ನಾಯಕರಾದ ಅಲ್ಪೆಶ್‌ ಠಾಕೂರ್‌ ಮತ್ತು ಧವಳಸಿಂಹ ಜಾಲಾ ಅವರನ್ನು ಬಿಜೆಪಿಯು ಕಾಂಗ್ರೆಸ್‌ನಿಂದ ಬರಮಾಡಿಕೊಂಡಿತ್ತು. ಈ ಇಬ್ಬರೂ ಗುಜರಾತ್‌ನ ವಿಧಾನಸಭಾ ಕ್ಷೇತ್ರಗಳಲ್ಲಿ ಸೋತಿದ್ದಾರೆ. ಸಾತಾರಾ ಲೋಕಸಭಾ ಕ್ಷೇತ್ರದಲ್ಲಿ ಎನ್‌ಸಿಪಿಯಿಂದ ಗೆದ್ದಿದ್ದ ಉಯದನ್‌ರಾಜೇ ಭೋಸ್ಲೆ ಅವರಿಂದ ರಾಜೀನಾಮೆ ಕೊಡಿಸಿ ಮತ್ತೆ ಅದೇ ಕ್ಷೇತ್ರದಿಂದ ಬಿಜೆಪಿ ಕಣಕ್ಕೆ ಇಳಿಸಿತ್ತು. ಕ್ಷೇತ್ರವನ್ನು ಎನ್‌ಸಿಪಿಯಿಂದ ಕಿತ್ತುಕೊಳ್ಳಬೇಕು ಎಂಬುದು ಬಿಜೆಪಿಯ ಇರಾದೆಯಾಗಿತ್ತು. ಆದರೆ, ಎನ್‌ಸಿಪಿ ಅಭ್ಯರ್ಥಿ ಶ್ರೀನಿವಾಸ್‌ ದಾದಾಸಾಹೇಬ್‌ ಪಾಟೀಲ್‌ ಎದುರು ಬೋಸ್ಲೆ ಸೋತಿದ್ದಾರೆ. ಬಿಜೆಪಿಯ ಕಾರ್ಯತಂತ್ರ ತಿರುಗುಬಾಣವಾಯಿತು.

ADVERTISEMENT

ಪಕ್ಷಾಂತರಿಗಳಾದ ಅಲ್ಪೆಶ್‌ ಮತ್ತು ಜಾಲಾ ಸ್ಪರ್ಧಿಸಿದ್ದ ಕ್ಷೇತ್ರಗಳು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದವು. ಅದಲ್ಲದೆ, ಬಿಜೆಪಿ ಪ್ರತಿನಿಧಿಸಿದ್ದ ಒಂದು ಕ್ಷೇತ್ರವನ್ನು ಕಸಿದುಕೊಳ್ಳುವಲ್ಲಿಯೂ ಕಾಂಗ್ರೆಸ್‌ ಯಶಸ್ವಿಯಾಗಿದೆ. ಹಾಗಿದ್ದರೂ ಗುಜರಾತ್‌ನಲ್ಲಿ ತಾನು ಪ್ರತಿನಿಧಿಸಿದ್ದ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಗೆಲ್ಲಲು ಮಾತ್ರ ಕಾಂಗ್ರೆಸ್‌ಗೆ ಸಾಧ್ಯವಾಗಿದೆ.

ಉತ್ತರ ಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು. ತಾನು ಹಿಂದೆ ಪ್ರತಿನಿಧಿಸಿದ್ದ ಎಂಟು ಕ್ಷೇತ್ರಗಳ ಪೈಕಿ ಏಳನ್ನು ಮಾತ್ರ ಬಿಜೆಪಿ ಗೆದ್ದಿದೆ. ಎಸ್‌ಪಿ ಎರಡು ಕ್ಷೇತ್ರಗಳನ್ನು ಗೆದ್ದರೆ, ಬಿಎಸ್‌ಪಿ, ಅಪ್ನಾ ದಳ ತಲಾ ಒಂದು ಕ್ಷೇತ್ರಗಳಲ್ಲಿ ಜಯ ಗಳಿಸಿವೆ.

ಇನ್ನೊಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರದ ಚಿತ್ರಣ ಎನ್‌ಡಿಎಯ ಚಿಂತೆಗೆ ಕಾರಣವಾಗಬಹುದು. ಉಪಚುನಾವಣೆ ನಡೆದ ಐದು ಕ್ಷೇತ್ರಗಳ ಪೈಕಿ ಬಿಜೆಪಿಯ ಮಿತ್ರಪಕ್ಷ ಜೆಡಿಯು ಗೆಲ್ಲಲು ಸಾಧ್ಯವಾಗಿದ್ದು ಒಂದರಲ್ಲಿ ಮಾತ್ರ. ಪ್ರತಿಸ್ಪರ್ಧಿ ಆರ್‌ಜೆಡಿ ಎರಡು ಕ್ಷೇತ್ರಗಳನ್ನು ಗೆದ್ದಿದೆ. ಕಾಂಗ್ರೆಸ್‌ ಪ್ರತಿನಿಧಿಸಿದ್ದ ಕಿಶನ್‌ಗಂಜ್ ಕ್ಷೇತ್ರವು ಎಐಎಂಐಎಂ ಪಾಲಾಗಿದೆ. ದರೌಂದಾ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಯನ್ನು ಬಿಜೆಪಿಯ ಬಂಡಾಯ ಅಭ್ಯರ್ಥಿ ಸೋಲಿಸಿದ್ದಾರೆ.ಆದರೆ, ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಬಿಜೆಪಿಗೆ ಒಳ್ಳೆಯ ಫಲಿತಾಂಶ ಸಿಕ್ಕಿದೆ.

ಕಮಲನಾಥ್‌ಗೆ ಸರಳ ಬಹುಮತ

ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಬಲ ಸರಳ ಬಹುಮತದ 115ಕ್ಕೆ ಏರಿದೆ. ಬಿಜೆಪಿಯ ವಶದಲ್ಲಿದ್ದ ಜಬುವಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದೆ. ರಾಜಸ್ಥಾನದ ಮಂಡವಾ ಕ್ಷೇತ್ರವನ್ನು ಬಿಜೆಪಿಯಿಂದ ಕಾಂಗ್ರೆಸ್‌ ಕಸಿದುಕೊಂಡಿದೆ.

ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ಸಿಕ್ಕಿದೆ. ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕಾಂಗ್ರೆಸ್‌ ಪಾಲಾಗಿವೆ. ಇವುಗಳ ಪೈಕಿ ಒಂದರಲ್ಲಿ ಮಾತ್ರ ಹಿಂದೆ ಕಾಂಗ್ರೆಸ್‌ ಶಾಸಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.