
ದೆಹಲಿಯ ರಾಜ್‌ಘಾಟ್‌ನಲ್ಲಿನ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು
–ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 78ನೇ ಪುಣ್ಯತಿಥಿ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
ದೆಹಲಿಯ ರಾಜ್‌ಘಾಟ್‌ನಲ್ಲಿನ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ್ದಾರೆ.
‘ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಪೂಜ್ಯ ಬಾಪು ಅವರು ಯಾವಾಗಲೂ ಸ್ವದೇಶಿ ವಸ್ತುಗಳ ಬಳಕೆಯ ಬಗ್ಗೆ ಒತ್ತು ನೀಡಿದ್ದರು. ಇದು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ನಮ್ಮ ಸಂಕಲ್ಪದ ಮೂಲಾಧಾರವಾಗಿದೆ. ಅವರ (ಗಾಂಧೀಜಿ) ವ್ಯಕ್ತಿತ್ವ ಮತ್ತು ಸೃಜನಶೀಲತೆಯು ದೇಶವಾಸಿಗಳಿಗೆ ಕರ್ತವ್ಯದ ಹಾದಿಯಲ್ಲಿ ನಡೆಯಲು ಯಾವಾಗಲೂ ಸ್ಫೂರ್ತಿ ನೀಡುತ್ತದೆ’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಮಹಾತ್ಮ ಗಾಂಧಿ ವ್ಯಕ್ತಿಯಷ್ಟೇ ಅಲ್ಲ. ಸಾಮ್ರಾಜ್ಯಶಾಹಿ, ದ್ವೇಷಪೂರಿತ ಸಿದ್ಧಾಂತ, ಸರ್ವಾಧಿಕಾರವನ್ನು ನಿರ್ಮೂಲನೆ ಮಾಡುವ ಪ್ರಬಲ ಆಲೋಚನೆಯಾಗಿದ್ದಾರೆ. ರಾಷ್ಟ್ರಪಿತರು ಸ್ವಾತಂತ್ರ್ಯದ ಜತೆಗೆ ‘ಅಧಿಕಾರ ಬಲಕ್ಕಿಂತ ಸತ್ಯದ ಶಕ್ತಿ ದೊಡ್ಡದು, ಅಹಿಂಸೆ ಮತ್ತು ಧೈರ್ಯವು ಹಿಂಸೆ ಹಾಗೂ ಭಯಕ್ಕಿಂತ ದೊಡ್ಡದು’ ಎಂಬ ತತ್ವವನ್ನು ಬಿಟ್ಟುಹೋಗಿದ್ದಾರೆ’ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಗಾಂಧೀಜಿಯವರು ಭಾರತೀಯರ ಆತ್ಮದಲ್ಲಿ ಅಮರರಾಗಿರುವುದರಿಂದ ಅವರ ಚಿಂತನೆಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಬಾಪು ಅವರು ಹುತಾತ್ಮರಾದ ದಿನದಂದು ಅವರಿಗೆ ವಿನಮ್ರ ಗೌರವ ನಮನಗಳು’ ಎಂದೂ ರಾಹುಲ್ ತಿಳಿಸಿದ್ದಾರೆ.
‘ರಾಷ್ಟ್ರಪಿತ ಪೂಜ್ಯ ಬಾಪು ಅವರನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸಿ ನಮಿಸುತ್ತೇನೆ. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸತ್ಯ, ಶಾಂತಿ, ಅಹಿಂಸೆಯ ಆಯಾಮ ಕೊಟ್ಟು ಚಳವಳಿಯನ್ನು ಮುನ್ನಡಿಸಿ ಯಶಸ್ಸು ಸಾಧಿಸಿದ ಮಹಾತ್ಮ ಗಾಂಧೀಜಿ ಅವರಿಗೆ, ಅವರ ಪುಣ್ಯಸ್ಮರಣೆ ಈ ದಿನದಂದು ನಮನಗಳನ್ನು ಸಮರ್ಪಿಸುತ್ತೇನೆ. ಮಹಾತ್ಮರು ಅಗಲಿದ ಈ ದಿನವನ್ನು ರಾಷ್ಟ್ರೀಯ ಹುತಾತ್ಮರ ದಿನ ಎಂದು ಆಚರಿಸಲಾಗುತ್ತದೆ. ಅಲ್ಲದೆ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆಗೈದ ಎಲ್ಲಾ ಮಹನೀಯರನ್ನು ಭಕ್ತಿಭಾವದಿಂದ ಸ್ಮರಿಸಿ ನಮಿಸುತ್ತೇನೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
'ದ್ವೇಷ, ಹಿಂಸೆ, ಮತೀಯವಾದದೆಡೆಗೆ ವಾಲುತ್ತಿದ್ದ ಭಾರತೀಯ ಸಮಾಜವನ್ನು ಸತ್ಯ, ಶಾಂತಿ, ಪ್ರೀತಿ, ಸೌಹಾರ್ದತೆಯ ಹಾದಿಯಲ್ಲಿ ಮುನ್ನಡೆಸಿದ ಮಹಾನ್ ಸಂತ ಮಹಾತ್ಮ ಗಾಂಧಿಯವರು ಕೊನೆಗೆ ಆ ಕಾರಣಕ್ಕಾಗಿಯೇ ಹುತಾತ್ಮರಾಗಬೇಕಾದುದ್ದು ದುರಂತ. ಅಂದು ಗಾಂಧಿಯನ್ನು ಕೊಂದ ವಿಚ್ಛಿದ್ರಕಾರಿ ಮನಸ್ಥಿತಿಗಳು ಇಂದು ಗಾಂಧಿಯ ಸಿದ್ಧಾಂತವನ್ನು ನಿತ್ಯವೂ ಕೊಲ್ಲುತ್ತಿವೆ. ಇಡೀ ವಿಶ್ವವೇ ಒಪ್ಪಿ, ಅಪ್ಪಿಕೊಂಡಿರುವ ಗಾಂಧಿಯನ್ನು, ಗಾಂಧಿವಾದವನ್ನು ಭಾರತದಲ್ಲಿ ಉಳಿಸಿಕೊಳ್ಳಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಜಾತಿ, ಧರ್ಮ, ಗಡಿಗಳನ್ನು ಮೀರಿ ಲೋಕದ ಕಷ್ಟಕ್ಕೆ ಮಿಡಿಯುತ್ತಿದ್ದ ಮಹಾತ್ಮ ಗಾಂಧಿ ಎಂಬ ದಾರ್ಶನಿಕ, ಸಂತ, ಮಾನವತಾವಾದಿಗೆ ಕೋಟಿ ನಮನಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.