ADVERTISEMENT

‘ಬಿಡ್ಡಿಂಗ್ ನಡೆಸಿ ಟಿಕೆಟ್ ಮಾರುತ್ತಿರುವ ಬಿಎಸ್‌ಪಿ’: ಕೇಂದ್ರ ಸಚಿವ ಶರ್ಮಾ ಆರೋಪ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 8:37 IST
Last Updated 30 ಮಾರ್ಚ್ 2019, 8:37 IST
ಮಹೇಶ್‌ ಶರ್ಮಾ
ಮಹೇಶ್‌ ಶರ್ಮಾ   

ಬುಲಂದ್‌ಶಹರ್:ಬಹುಜನ ಸಮಾಜವಾದಿ ಪಕ್ಷವು(ಬಿಎಸ್‌ಪಿ) ‘ಬಿಡ್ಡಿಂಗ್‌ ನಡೆಸಿ ಲೋಕಸಭೆ ಚುನಾವಣೆಯ ಟಿಕೆಟ್‌ ಮಾರುತ್ತಿದೆ’ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಖಾತೆಯ ಸಚಿವ ಮಹೇಶ್‌ ಶರ್ಮಾ ಆರೋಪಿಸಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶರ್ಮಾ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಬಿಎಸ್‌ಪಿ ಬಿಡ್ಡಿಂಗ್‌ ನಡೆಸಿ ಟಿಕೆಟ್‌ ಮಾರುತ್ತಿದೆ. ₹ 20 ಕೋಟಿಗೆ ಟಿಕೆಟ್‌ ಮಾರುತ್ತಿರುವ ಪಕ್ಷ ದೇಶವನ್ನು ಮುನ್ನಡೆಸಲು ಹೇಗೆ ಸಾಧ್ಯ? ಒಂದುವೇಳೆ ಮಾಯಾವತಿ ಹಾಗೂ ಅವರ ಬೆಂಬಲಿಗ(ಅಖಿಲೇಶ್‌ ಯಾದವ್‌) ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ 1995ರ ಕುಖ್ಯಾತ ಪ್ರವಾಸಿ ಮಂದಿರ ಪ್ರಕರಣ ಮರುಕಳಿಸಲಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ADVERTISEMENT

ಅವರು ಈ ರೀತಿ ಹೇಳಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧವೂ ಹರಿಹಾಯ್ದ ಶರ್ಮಾ,ಕಾಂಗ್ರೆಸ್‌ ಚರಣ್‌ ಸಿಂಗ್‌, ವಿ.ಪಿ. ಸಿಂಗ್‌, ಐಕೆ ಗುಜ್ರಾಲ್‌, ದೇವೇಗೌಡ ಅವರನ್ನು ಪ್ರಧಾನಿ ಮಾಡಿತ್ತು. ನಂತರ ಅವರನ್ನು ಅವರವರ ಸ್ಥಾನಕ್ಕೇ ಮರಳಿಸಿತ್ತು. ಕಾಂಗ್ರೆಸ್‌ ರಾಷ್ಟ್ರ ಮಟ್ಟದ ಪಕ್ಷವಲ್ಲ. ಅದು ತಾಯಿ ಮಗನ ಪಕ್ಷ ಎಂದು ಕುಟುಕಿದರು.

‘ತಾಯಿ(ಸೋನಿಯಾ) ತನ್ನ ಮಗನನ್ನು(ರಾಹುಲ್‌) 2007ರಿಂದಲೂ ಮುಂದಕ್ಕೆ ತರಲು ಪ್ರಯತ್ನಿಸುತ್ತಿದ್ದಾಳೆ. ಆದರೆ, ಅವನಿಗೆ ಮುಂದೆ ಬರುವ ಸಾಧ್ಯವಾಗುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

‘ಈ ದೇಶವನ್ನು ಮುನ್ನಡೆಸಲುದೇಶಕ್ಕಾಗಿ ಮಿಡಿಯುವ 56 ಇಂಚಿತ ಎದೆ ಹಾಗೂ ಅದರ ಭುಜ ಬೇಕು. ನಿಮ್ಮ ತಾತ, ಅಜ್ಜಿ, ಅಪ್ಪ ‘ಗರೀಬಿ ಹಠಾವೋ’(ಬಡತನ ನಿರ್ಮೂಲನೆ) ಎಂದು ಹಾಡಿದ್ದರು. ಆದರೆ ನಾವು ಐದು ವರ್ಷದಲ್ಲಿ ಅಭಿವೃದ್ಧಿ ಮಾಡಿದ್ದೇವೆ’ ಎಂದೂ ಸಾರಿದರು.

ಮಾರ್ಚ್‌ 18ರಂದು ಸಿಕಂದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶರ್ಮಾ, ರಾಹುಲ್‌ ಅವರನ್ನು ಪಪ್ಪು ಎಂದು ಲೇವಡಿ ಮಾಡಿದ್ದರು. ರಾಹುಲ್‌ ಸೋದರಿ ಪ್ರಿಯಾಂಕ ವಾದ್ರಾ ಅವರನ್ನು ‘ಪಪ್ಪು ಕಾ ಪಪ್ಪಿ’ ಎಂದು ಕಾಲೆಳೆದಿದ್ದರು. ಮಾತ್ರವಲ್ಲದೆ,ಪಪ್ಪು ತಾನು ಪ್ರಧಾನಿಯಾಗಬೇಕು ಎಂದು ಹೇಳುತ್ತಿದ್ದಾನೆ. ಹಾಗಾಗಿ ಮಾಯಾವತಿ, ಅಖಿಲೇಶ್‌ ಯಾದವ್‌, ಪಪ್ಪು ಹಾಗೂ ಇದೀಗ ಪಪ್ಪಿ ಕೂಡ ಸಾಲಿನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.