ADVERTISEMENT

ಪೊಲೀಸರತ್ತ ಉಗುಳಿದ ದೆಹಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ: ಬಿಜೆಪಿ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2022, 14:14 IST
Last Updated 21 ಜೂನ್ 2022, 14:14 IST
ವಿಡಿಯೊ ಸ್ಕ್ರೀನ್ ಗ್ರ್ಯಾಬ್‌
ವಿಡಿಯೊ ಸ್ಕ್ರೀನ್ ಗ್ರ್ಯಾಬ್‌   

ನವದೆಹಲಿ: ರಾಹುಲ್ ಗಾಂಧಿಯವರನ್ನು ಇ.ಡಿ ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪೊಲೀಸ್ ಅಧಿಕಾರಿಗಳತ್ತ ಉಗುಳಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೊಲೀಸ್ ವಾಹನ ಹತ್ತಿಸಿದ ಬಳಿಕ ವಾಹನದ ಬಾಗಿಲು ಮುಚ್ಚುವುದಕ್ಕೂ ಮುನ್ನ ಪೊಲೀಸರ ಜೊತೆ ವಾಗ್ವಾದ ನಡೆಸಿರುವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಅವರು, ಅಧಿಕಾರಿಗಳತ್ತ ಉಗುಳಿರುವ ದೃಶ್ಯ ವಿಡಿಯೊದಲ್ಲಿದೆ.

ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು, ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

ADVERTISEMENT

'ಕೇವಲ ರಾಹುಲ್ ಗಾಂಧಿಯನ್ನು ಇ.ಡಿ ವಿಚಾರಣೆ ನಡೆಸುತ್ತಿರುವ ಮಾತ್ರಕ್ಕೆ ಅಸ್ಸಾಂನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ, ಹೈದರಾಬಾದ್‌ನಲ್ಲಿ ಪೊಲೀಸ್ ಕಾಲರ್ ಹಿಡಿದಿದ್ದಾಯ್ತು..ಈಗ ದೆಹಲಿಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಅವರು ಪೊಲೀಸರು ಮತ್ತು ಮಹಿಳಾ ಭದ್ರತಾ ಸಿಬ್ಬಂದಿ ಮೇಲೆ ಉಗುಳುವ ಮೂಲಕ ನಾಚಿಕೆಗೇಡಿನ ಮತ್ತು ಅಸಹ್ಯಕರ ಕೃತ್ಯ ಎಸಗಿದ್ದಾರೆ. ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಇವರ ವಿರುದ್ಧ ಕ್ರಮ ಕೈಗೊಳ್ಳುವರೇ?’ಎಂದು ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಈ ಮಧ್ಯೆ, ಇಂದು ಐದನೇ ದಿನ ರಾಹುಲ್ ಗಾಂಧಿ ಇ.ಡಿ ವಿಚಾರಣೆಗೆ ಹಾಜರಾಗಿದ್ದರು. ರಾಹುಲ್ ಗಾಂಧಿ ವಿಚಾರಣೆ ಖಂಡಿಸಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ಜಂತರ್‌ಮಂತರ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿದ್ದ ನಾಯಕರನ್ನು ಪೊಲೀಸರು ತಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.