ADVERTISEMENT

ಪ್ರಶ್ನೆಗಾಗಿ ಲಂಚ: ಮಹುವಾ ಅರ್ಜಿಗೆ ಸಿಬಿಐ ವಿರೋಧ

ಪಿಟಿಐ
Published 21 ನವೆಂಬರ್ 2025, 15:48 IST
Last Updated 21 ನವೆಂಬರ್ 2025, 15:48 IST
<div class="paragraphs"><p>ಮಹುವಾ ಮೊಯಿತ್ರಾ</p></div>

ಮಹುವಾ ಮೊಯಿತ್ರಾ

   

–ಪಿಟಿಐ ಚಿತ್ರ

ನವದೆಹಲಿ: ‘‍ಪ್ರಶ್ನೆಗಾಗಿ ಲಂಚ’ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಕೇಂದ್ರ ತನಿಖಾ ಸಂಸ್ಥೆಗೆ (ಸಿಬಿಐ) ಅನುಮತಿ ನೀಡಿದ ಲೋಕಪಾಲದ ನಿರ್ಧಾರವನ್ನು ಪ್ರಶ್ನಿಸಿ ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಇದಕ್ಕೆ ಸಿಬಿಐ ವಿರೋಧ ವ್ಯಕ್ತಪಡಿಸಿದೆ.

ADVERTISEMENT

‘ಲೋಕಪಾಲ ವಿಚಾರಣೆ ವೇಳೆ ಯಾವುದೇ ದಾಖಲೆಗಳನ್ನು ಸಲ್ಲಿಸಲು ಮೊಯಿತ್ರಾ ಅವರಿಗೆ ಯಾವುದೇ ಹಕ್ಕುಗಳಿಲ್ಲ. ತನ್ನ ಹೇಳಿಕೆಗಳನ್ನು ಮಾತ್ರ ದಾಖಲಿಸಬಹುದು’ ಎಂದು ಸಿಬಿಐ ತಿಳಿಸಿದೆ.

ಈ ಪ‍್ರಕರಣದಲ್ಲಿ ಮಹುವಾ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಲೋಕಪಾಲವು ಅನುಮತಿ ನೀಡಿದೆ. ಈ ವಿಚಾರದಲ್ಲಿ ಅವರು (ಮಹುವಾ) ಹೇಳಿಕೆ ನೀಡಬಹುದು ಎಂದು ಸಿಬಿಐ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ತಿಳಿಸಿದರು.

ಎರಡು ಕಡೆ ವಾದ ಆಲಿಸಿದ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್‌, ಹರೀಶ್‌ ವೈದ್ಯನಾಥನ್‌ ಶಂಕರ್‌ ಅವರಿದ್ದ ಪೀಠವು ಮಹುವಾ ಅರ್ಜಿ ವಿಚಾರಣೆಗೆ ಸಂಬಂಧಿಸಿದ ತೀರ್ಪು ಕಾಯ್ದಿರಿಸಿದೆ.

ಪ್ರಕರಣವೇನು?: ಉದ್ಯಮಿ ಗೌತಮ್ ಅದಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಉದ್ಯಮಿ ದರ್ಶನ್ ಹೀರಾನಂದಾನಿ ಅವರ ಆಣತಿಯಂತೆ 2023ರಲ್ಲಿ ಮಹುವಾ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕಾಗಿ ದರ್ಶನ್‌ ಅವರಿಂದ ಲಂಚ ಪಡೆದಿರುವುದಲ್ಲದೇ, ತಮ್ಮ ಖಾತೆಯ ಲಾಗಿನ್ ವಿವರಗಳನ್ನೂ ಅವರೊಂದಿಗೆ ಹಂಚಿಕೊಂಡಿದ್ದಾರೆಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಆರೋಪಿಸಿದ್ದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಗಳನ್ನು ನಡೆಸಿದ ಬಳಿಕ ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಲಾಗಿತ್ತು. ಇದೇ ವೇಳೆ ಲೋಕಪಾಲವು ಸಿಬಿಐ ತನಿಖೆಗೆ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.