ADVERTISEMENT

ಮಣಿಪುರ ಹಿಂಸಾಚಾರ: ನಿಯಮ 267ರ ಅಡಿ ಚರ್ಚೆಗೆ ಪಟ್ಟು

ಉಭಯ ಸದನದಲ್ಲಿ ಪ್ರಧಾನಿ ಮೋದಿ ಹೇಳಿಕೆಗೆ ‘ಇಂಡಿಯಾ’ ಒತ್ತಾಯ

ಪಿಟಿಐ
Published 25 ಜುಲೈ 2023, 11:28 IST
Last Updated 25 ಜುಲೈ 2023, 11:28 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಮಣಿಪುರದ ಜನಾಂಗೀಯ ಹಿಂಸಾಚಾರ ಕುರಿತು ಸಂಸತ್‌ನ ಉಭಯ ಸದನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಗ್ರವಾಗಿ ಹೇಳಿಕೆ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಸಂಘರ್ಷ ಸಂಭವಿಸಿ 83 ದಿನಗಳು ಉರುಳಿವೆ. ಹಿಂಸಾಚಾರವು ನೆರೆಯ ರಾಜ್ಯಗಳಿಗೂ ಹಬ್ಬುವ ಆತಂಕವಿದೆ. ದೇಶದ ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ಈ ವಿದ್ಯಮಾನ ಕಂಟಕಪ್ರಾಯವಾಗಿದೆ ಎಂದು ಟ್ವೀಟ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. 

ಕಣಿವೆ ರಾಜ್ಯದಲ್ಲಿ ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಿನ ಘರ್ಷಣೆಯ ಕಥೆಗಳು ಭಯಾನಕವಾಗಿವೆ. ಈಗಾಗಲೇ, ಸಮಯವೂ ಮೀರಿ ಹೋಗಿದೆ. ಮಣಿಪುರದ ಬಗ್ಗೆ ನಂಬಿಕೆ ಮೂಡಿಸಲು ಪ್ರಧಾನಿ ಮೋದಿ ಅವರು ‘ಅಹಂ’ ಬದಿಗೊತ್ತಿ ಸಂಸತ್‌ನಲ್ಲಿ ವಿವರಣೆ ನೀಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ಕಣಿವೆ ರಾಜ್ಯವು ಯಥಾಸ್ಥಿತಿಗೆ ಯಾವಾಗ ಮರಳುತ್ತದೆ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಮಗ್ರ ಚರ್ಚೆಗೆ ಆಗ್ರಹ:

ಖರ್ಗೆ ಸೇರಿದಂತೆ 27 ಸಂಸದರು ನಿಯಮ 267‌ರ ಅಡಿ ಚರ್ಚೆಗೆ ರಾಜ್ಯಸಭೆಯಲ್ಲಿ ಅವಕಾಶ ನೀಡುವಂತೆ ನೋಟಿಸ್‌ ಸಲ್ಲಿಸಿದ್ದಾರೆ. ಇದರನ್ವಯ ಸದನದಲ್ಲಿ ಎಲ್ಲಾ ವಿಷಯಗಳನ್ನು ಬದಿಗೊತ್ತಿ ನಿರ್ದಿಷ್ಟ ವಿಷಯ ಕುರಿತು ಚರ್ಚಿಸಬೇಕಾಗುತ್ತದೆ.

ಆದರೆ, ಕೇಂದ್ರ ಸರ್ಕಾರವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ನಿಯಮ 176ರ ಅಡಿ ಚರ್ಚೆಗೆ ಸಿದ್ಧವಿರುವುದಾಗಿ ಹೇಳಿದೆ. ಇದು ಅಲ್ಪಾವಧಿಯ ಚರ್ಚೆಗೆ ಅವಕಾಶ ಕಲ್ಪಿಸುತ್ತದೆ. ಹಾಗಾಗಿ, ಇದಕ್ಕೆ ‘ಇಂಡಿಯಾ’ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸಂಘರ್ಷದ ಬಗ್ಗೆ ಮೋದಿ ನಿರ್ಲಕ್ಷ್ಯವಹಿಸಿರುವುದು ಆಘಾತಕಾರಿಯಾಗಿದೆ. ಹಿಂಸಾಚಾರ ನಿಯಂತ್ರಿಸುವಲ್ಲಿ ಕೇಂದ್ರ ಗೃಹ ಸಚಿವರು ಸೋತಿದ್ದಾರೆ. ಅಮಿತ್‌ ಶಾ ಅವರು ಅಲ್ಲಿಗೆ ಭೇಟಿ ನೀಡಿದ ಹೊರತಾಗಿಯೂ ಶಾಂತಿ ಪುನರ್ ಸ್ಥಾಪಿಸುವ ಪ್ರಕ್ರಿಯೆಗಳು ಸಾಕಾರಗೊಂಡಿಲ್ಲ ಎಂದು ನೋಟಿಸ್‌ನಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.