
ನರೇಂದ್ರ ಮೋದಿ
(ಪಿಟಿಐ ಚಿತ್ರ)
ನವದೆಹಲಿ: ವಿವಿಧ ವಲಯಗಳಲ್ಲಿನ ತಯಾರಿಕಾ ಚಟುವಟಿಕೆ ಭಾರತದಲ್ಲಿಯೇ ನಡೆಯಬೇಕು ಎಂದು ಮತ್ತೊಮ್ಮೆ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಸುಧಾರಣಾ ಪ್ರಕ್ರಿಯೆಗಳಿಗೆ ಕೇಂದ್ರ ಸರ್ಕಾರವು ವೇಗ ನೀಡುತ್ತಿದೆ ಎಂದರು.
ಮೊಬೈಲ್ ತಯಾರಿಕೆಯಿಂದ ಆರಂಭಿಸಿ ಸೆಮಿಕಂಡಕ್ಟರ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳವರೆಗೆ ಎಲ್ಲವೂ ಭಾರತದಲ್ಲೇ ತಯಾರಾಗುವಂತೆ ಆಗಬೇಕು ಎಂದು ಅವರು ಹೇಳಿದರು. ಭಾರತವು ಹೂಡಿಕೆಗೆ ಅತ್ಯುತ್ತಮವಾದ ಅವಕಾಶಗಳನ್ನು ನೀಡುತ್ತಿದೆ ಎಂದರು.
‘ಭಾರತೀಯ ಮೊಬೈಲ್ ಕಾಂಗ್ರೆಸ್’ ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆ, ಹೂಡಿಕೆಗಳನ್ನು ಸ್ವಾಗತಿಸುವ ಸರ್ಕಾರದ ನಿಲುವು, ಉದ್ಯಮ ನಡೆಸುವುದನ್ನು ಸುಲಲಿತವಾಗಿಸುವ ನೀತಿಗಳು ಭಾರತವು ಹೂಡಿಕೆದಾರ ಸ್ನೇಹಿ ತಾಣ ಎಂಬ ಹೆಸರು ಗಳಿಸುವಂತೆ ಮಾಡಿವೆ’ ಎಂದು ಹೇಳಿದರು.
‘ಭಾರತದಲ್ಲಿ ಹೂಡಿಕೆ ಮಾಡಲು, ಭಾರತದಲ್ಲೇ ತಯಾರಿಸಲು ಇದು ಪ್ರಶಸ್ತವಾದ ಸಮಯ’ ಎಂದು ಮೋದಿ ಅವರು ಹೇಳಿದರು.
ದೊಡ್ಡ ಮಟ್ಟದ ಬದಲಾವಣೆಗಳು ಹಾಗೂ ದೊಡ್ಡ ಮಟ್ಟದ ಸುಧಾರಣೆಗಳ ವರ್ಷ ಇದಾಗಿರಲಿದೆ ಎಂದು ತಾವು ಆಗಸ್ಟ್ 15ರಂದು ಘೋಷಿಸಿದ್ದನ್ನು ಮೋದಿ ನೆನಪಿಸಿದರು. ‘ಸುಧಾರಣೆಗಳ ವೇಗವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದೇವೆ’ ಎಂದು ಅವರು ಹೇಳಿದರು. ಆದರೆ ಈ ಕುರಿತಾಗಿ ಹೆಚ್ಚಿನ ವಿವರ ನೀಡಲಿಲ್ಲ.
ಸೆಮಿಕಂಡಕ್ಟರ್, ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್‌ಗಳ ತಯಾರಿಕಾ ವಲಯದಲ್ಲಿ ಭಾರತವು ಅಗಾಧ ಅವಕಾಶಗಳನ್ನು ನೀಡುತ್ತಿದೆ. ಉದ್ಯಮ ಕ್ಷೇತ್ರ, ನವೋದ್ಯಮಗಳು ಈಗ ಮುಂದಡಿ ಇರಿಸಬೇಕು ಎಂದರು.
ಡಿಜಿಟಲ್ ಜಗತ್ತಿನಲ್ಲಿ ಭಾರತವು ಒಂದು ದಶಕದಲ್ಲಿ ಸಾಧಿಸಿದ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತದಲ್ಲಿ 1 ಜಿ.ಬಿ. ಡೇಟಾ ಬೆಲೆಯು ಈಗ ಒಂದು ಕಪ್ ಚಹಾದ ಬೆಲೆಗಿಂತ ಕಡಿಮೆ ಆಗಿದೆ ಎಂದರು. ‘ಡಿಜಿಟಲ್ ಸಂಪರ್ಕವು ಇಂದು ಭಾರತದಲ್ಲಿ ಐಷಾರಾಮದ ಸಂಗತಿಯಾಗಿ ಉಳಿದಿಲ್ಲ. ಅದು ಈಗ ಪ್ರತಿ ಭಾರತೀಯನ ಅವಿಭಾಜ್ಯ ಅಂಗವಾಗಿದೆ’ ಎಂದು ಬಣ್ಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.