ADVERTISEMENT

ಮಲಯಾಳ ನಟಿ ರಿನಿ ಆರೋಪ: ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ

ಅರ್ಜುನ್ ರಘುನಾಥ್
Published 21 ಆಗಸ್ಟ್ 2025, 12:07 IST
Last Updated 21 ಆಗಸ್ಟ್ 2025, 12:07 IST
<div class="paragraphs"><p>ರಾಹುಲ್ ಮಮಕೂಟತ್ತಿಲ್‌</p></div>

ರಾಹುಲ್ ಮಮಕೂಟತ್ತಿಲ್‌

   

ಎಕ್ಸ್ ಚಿತ್ರ

ತಿರುವನಂತಪುರ: ಮಹಿಳೆಗೆ ಕಿರುಕುಳ ನೀಡಿದ ಆರೋಪ ಕೇಳಿಬಂದ ಬೆನ್ನಲ್ಲೇ ಕೇರಳ ಘಟಕದ ಯುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಮಮಕೂಟತ್ತಿಲ್‌ ತಮ್ಮ ಹುದ್ದೆಗೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ADVERTISEMENT

ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಎಐಸಿಸಿ ಮುಖಂಡರು, ತಕ್ಷಣ ರಾಜೀನಾಮೆ ಸಲ್ಲಿಸುವಂತೆ ರಾಹುಲ್‌ಗೆ ಸೂಚಿಸಿದ್ದರು.

ಮಲಯಾಳ ಚಿತ್ರ ನಟಿ ರಿನಿ ಅನ್‌ ಜಾರ್ಜ್ ಅವರು ನಾಯಕನೊಬ್ಬ ತನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು ಮತ್ತು ದುರ್ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿದ್ದರು.

ರಿನಿ ಅವರು ಆರೋಪ ಮಾಡಿ, ‘ಒಬ್ಬ ಮುಖಂಡನಿಂದ ತನಗೆ ಅಶ್ಲೀಲ ಸಂದೇಶಗಳು ಬರುತ್ತಿವೆ. ಹಿಂದೆಯೂ ಇದೇ ವ್ಯಕ್ತಿಯಿಂದ ಸಾಕಷ್ಟು ಕಹಿ ಅನುಭವಗಳಾಗಿವೆ. ಈ ವ್ಯಕ್ತಿ ಇತ್ತೀಚೆಗೆ ಜನಪ್ರತಿನಿಧಿಯೂ ಆಗಿ ಆಯ್ಕೆಯಾಗಿದ್ದಾರೆ’ ಎಂದಿದ್ದ ಅವರು ಹೆಸರು ಬಹಿರಂಗಪಡಿಸಿರಲಿಲ್ಲ.

ಅನಿವಾಸಿ ಭಾರತೀಯ ಹನಿ ಭಾಸ್ಕರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಗುರುವಾರ ಹೇಳಿಕೆಯೊಂದನ್ನು ಪ್ರಕಟಿಸಿದ್ದು, ‘ತನಗೂ ರಾಹುಲ್‌ರಿಂದ ಕೆಟ್ಟ ಅನುಭವವಾಗಿದೆ. ನನ್ನಂತೆ ಹಲವು ಮಹಿಳೆಯರು, ಕಾಂಗ್ರೆಸ್ ಕಾರ್ಯಕರ್ತೆಯರೂ ಈತನಿಂದ ಹಿಂಸೆ ಅನುಭವಿಸಿದ್ದಾರೆ. ಕಾಂಗ್ರೆಸ್‌ನ ಸಂಸದ ಮತ್ತು ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಶಫಿ ಪರಂಬಿಲ್‌ ಅವರಿಗೆ ಇವೆಲ್ಲವೂ ಗೊತ್ತಿದೆ’ ಎಂದು ಆರೋಪಿಸಿದ್ದರು.

ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್, ‘ನಟಿ ರಿನಿ ಅವರು ನನ್ನನ್ನು ಗುರಿಯಾಗಿಸಿ ಆರೋಪ ಮಾಡಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಮುಖಂಡರು ನನ್ನನ್ನು ಸಮರ್ಥಿಸಿಕೊಳ್ಳುವ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದಿದ್ದಾರೆ. 

ಕಳೆದ ನವೆಂಬರ್‌ನಲ್ಲಿ ಪಾಲಕ್ಕಾಡ್‌ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ರಾಹುಲ್ ಸ್ಪರ್ಧಿಸಿ ಗೆದ್ದಿದ್ದರು. ಪತ್ರಕರ್ತೆಯೊಬ್ಬರೊಂದಿಗೆ ರಾಹುಲ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪವೂ ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಗರ್ಭಿಣಿಯೊಂದಿಗೆ ರಾಹುಲ್ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೊ ಕೂಡಾ ಹರಿದಾಡಿದೆ.

‘ಇಂಥ ಕೃತ್ಯ ಎಸಗಿದವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ರಿನಿ ನನ್ನ ಮಗಳಿದ್ದಂತೆ. ಪಕ್ಷದ ಮುಖಂಡರೊಬ್ಬರಿಂದ ಇಂಥ ಅಸಂಬದ್ಧ ಸಂದೇಶಗಳು ಬರುತ್ತಿವೆ ಎಂದು ಅವರು ಹೇಳಿಕೊಂಡಿದ್ದರು’ ಎಂದು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಹೇಳಿದ್ದಾರೆ.

ಘಟನೆ ವಿರೋಧಿಸಿ ಸಿಪಿಐ(ಎಂ) ಮತ್ತು ಬಿಜೆಪಿ ಪ್ರತಿಭಟನೆ ನಡೆಸಿವೆ. ಜತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆಯೂ ಆಗ್ರಹಿಸಿವೆ.

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ವಿಧಾನಸಭಾ ಚುನಾವಣೆ ಎದುರಾಗುತ್ತಿದೆ. ಅದರ ಬೆನ್ನಲ್ಲೇ ಈ ಆರೋಪ ಕೇಳಿಬಂದಿರುವುದು ಪಕ್ಷಕ್ಕೆ ತೀವ್ರ ಮುಜುಗುರವನ್ನುಂಟು ಮಾಡಿದೆ. ಆದರೆ ಯಾವುದೇ ಮಹಿಳೆ ರಾಹುಲ್ ವಿರುದ್ಧ ದೂರು ನೀಡಿಲ್ಲ ಎಂಬುದರಿಂದ ಪಕ್ಷವು ಸದ್ಯ ನಿರಾಳವಾಗಿದೆ.

ವಿರೋಧಿಗಳ ಪಕ್ಷದಲ್ಲೂ ಕೆಲವರು ಇಂಥ ಲೈಂಗಿಕ ದೌರ್ಜನ್ಯ ಆರೋಪ ಎದುರಿಸಿದ್ದಾರೆ. ಇದರಲ್ಲಿ ನಟ ಮತ್ತು ಸಿಪಿಐ(ಎಂ) ಶಾಸಕ ಎಂ. ಮುಖೇಶ್ ವಿರುದ್ಧ ಕಳೆದ ವರ್ಷ ಇಂಥದ್ದೇ ಆರೋಪ ಕೇಳಿಬಂದಿತ್ತು. ಆದರೆ ಅವರ ರಾಜೀನಾಮೆಗೆ ಕೇಳಿಬಂದಿದ್ದ ಒತ್ತಾಯವನ್ನು ಪಕ್ಷ ಆಗ ತಿರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.