ADVERTISEMENT

ಅಸ್ಸಾಂನಲ್ಲಿ BJPಯಿಂದ ಜುಮ್ಲಾಗಳ ಕಾರ್ಖಾನೆ, ಸಿಎಂ ಆದರ ಮಾಸ್ಟರ್‌ಮೈಂಡ್: ಖರ್ಗೆ

ಪಿಟಿಐ
Published 24 ಫೆಬ್ರುವರಿ 2025, 11:02 IST
Last Updated 24 ಫೆಬ್ರುವರಿ 2025, 11:02 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಅಸ್ಸಾಂನಲ್ಲಿ ಬಿಜೆಪಿಯ ‘ದುರಾಡಳಿತ’ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ವಾಗ್ದಾಳಿ ನಡೆಸಿದ್ದು, ಅಸ್ಸಾಂನಲ್ಲಿ ‍ಪ್ರಧಾನಿ ನರೇಂದ್ರ ಮೋದಿ ‘ಜುಮ್ಲಾ’ ಕಾರ್ಖಾನೆಯನ್ನು ಸ್ಥಾಪಿಸಿದ್ದು, ಅಲ್ಲಿನ ಮುಖ್ಯಮಂತ್ರಿ ಅದರ ಮಾಸ್ಟರ್ ಮೈಂಡ್ ಎಂದು ಟೀಕಿಸಿದ್ದಾರೆ.

ಬಿಜೆಪಿ ಆಡಳಿತದ ವಿರುದ್ಧ ಅಲ್ಲಿನ ಜನ ಆಕ್ರೋಶಿತರಾಗಿದ್ದು, ಮುಂದಿನ ಬಾರಿ ಕಾಂಗ್ರೆಸ್‌ಗೆ ಅವಕಾಶ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

ADVERTISEMENT

‘ಅಸ್ಸಾಂನಲ್ಲಿ ಮೋದಿಯವರು ಜುಮ್ಲಾದ ಕಾರ್ಖಾನೆ ಸ್ಥಾಪಿಸಿದ್ದಾರೆ. ಅದರ ಮಾಸ್ಟರ್‌ ಮೈಂಡ್ ಅಲ್ಲಿನ ಭಾರಿ ಭ್ರಷ್ಟಾಚಾರಿ ಮುಖ್ಯಮಂತ್ರಿ. ಅಸ್ಸಾಂನ ಕಾಂಗ್ರೆಸ್ ನಾಯಕರನ್ನು ರಾಜಕೀಯ ಹಾಗೂ ದೈಹಿಕವಾಗಿ ದಾಳಿ ಮಾಡಲಾಗುತ್ತಿದೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಮೂಲಕ ಜನ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದ್ದಾರೆ.

‘ಬಿಜೆಪಿಯ ಭೂ ಮಾಫಿಯಾದ ಭ್ರಷ್ಟಾಚಾರ, ದ್ವೇಷ ಮತ್ತು ದುರಾಡಳಿತದ ಪರಿಣಾಮಗಳನ್ನು ಅಸ್ಸಾಂ ಅನುಭವಿಸುತ್ತಿದೆ. ಯುವಜನರ ನಿರುದ್ಯೋಗ, ಚಹಾ ತೋಟದ ಕಾರ್ಮಿಕರ ಅಸಹಾಯಕತೆ, ಅಕ್ರಮ ವಿದೇಶಿಯರ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್‌ನ ಖಂಡನೆ ಮತ್ತು ಬಿಜೆಪಿಯ ಬೂಟಾಟಿಕೆ ಎಲ್ಲರಿಗೂ ತಿಳಿದಿದೆ’ ಎಂದು ಅವರು ಹೇಳಿದ್ದಾರೆ.

‘ಅಭಿವೃದ್ಧಿ ಮತ್ತು ಆರ್ಥಿಕತೆಯ ವಿಷಯದಲ್ಲಿ ರಾಜ್ಯವು ಪ್ರತಿಯೊಂದು ಮಟ್ಟದಲ್ಲೂ ಹಿಂದುಳಿದಿದೆ. ಅಸ್ಸಾಂನ 3.5 ಕೋಟಿ ಜನರು ತೀವ್ರ ಕೋಪಗೊಂಡಿದ್ದಾರೆ. ಮೋದಿ ಅವರ ಯಾವುದೇ ಘೋಷಣೆ ಈಗ ಅವರ ಕೋಪವನ್ನು ಶಮನಗೊಳಿಸಲು ಸಾಧ್ಯವಿಲ್ಲ. ಅಸ್ಸಾಂ ಮತ್ತು ಈಶಾನ್ಯದಲ್ಲಿ ಬದಲಾವಣೆ ಖಚಿತ’ ಎಂದು ಖರ್ಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.