ADVERTISEMENT

ಆರ್‌ಟಿಐ ಮರುಪರಿಶೀಲನೆ | ಕಗ್ಗೊಲೆಗೆ ಕೇಂದ್ರ ಸರ್ಕಾರ ಯತ್ನ: ಖರ್ಗೆ ಆರೋಪ

​ಪ್ರಜಾವಾಣಿ ವಾರ್ತೆ
ಪಿಟಿಐ
Published 30 ಜನವರಿ 2026, 15:40 IST
Last Updated 30 ಜನವರಿ 2026, 15:40 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಇಪ್ಪತ್ತು ವರ್ಷಗಳಷ್ಟು ಹಳೆಯದಾದ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ಮರುಪರಿಶೀಲಿಸಬೇಕು ಎಂದು ಆರ್ಥಿಕ ಸಮೀಕ್ಷೆ ಮಾಡಿರುವ ಶಿಫಾರಸನ್ನು ಕಾಂಗ್ರೆಸ್‌ ಮುಖಂಡರು ಮತ್ತು ಆರ್‌ಟಿಐ ಕಾರ್ಯಕರ್ತರು ಶುಕ್ರವಾರ ಕಟುವಾಗಿ ಟೀಕಿಸಿದ್ದಾರೆ. 

ಕಾಯ್ದೆಯ ಅಡಿಯಲ್ಲಿ ಗೋಪ್ಯ ವರದಿಗಳು ಮತ್ತು ಕರಡು ಅಭಿಪ್ರಾಯಗಳನ್ನು ಬಹಿರಂಗ ಪಡಿಸುವುದಕ್ಕೆ ಅವಕಾಶ ನೀಡಬಾರದು. ಅಂತಹ ನಿಯಮಗಳು ಆಡಳಿತವನ್ನು ನಿರ್ಬಂಧಕ್ಕೊಳಪಡಿಸುತ್ತವೆ ಎಂದು ಸಮೀಕ್ಷೆಯಲ್ಲಿ ಪ್ರತಿಪಾದಿಸಿರುವುದನ್ನು ಕಾಂಗ್ರೆಸ್ ಖಂಡಿಸಿದೆ.

‘ಆರ್‌ಟಿಐ ದುರ್ಬಲಕ್ಕೆ ಯತ್ನ’:

ಈ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ, ‘ಮೋದಿ ಸರ್ಕಾರವು ಆರ್‌ಟಿಐ ಕಾಯ್ದೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲು ಮುಂದಾಗಿದೆ. ಈಗಾಗಲೇ ನರೇಗಾ ಅನ್ನು ಕೊಂದದ್ದು ಆಗಿದೆ. ಮುಂದಿನದ್ದು ಆರ್‌ಟಿಐ ಸರದಿಯೇ’ ಎಂದು ಪ್ರಶ್ನಿಸಿದ್ದಾರೆ. ಭ್ರಷ್ಟಾಚಾರವನ್ನು ರಕ್ಷಿಸಲು ಗೋಪ್ಯತೆಯನ್ನು ಆಯುಧವಾಗಿ ಬಳಸುವುದು ಎಷ್ಟು ಸರಿ ಎಂದು ಅವರು ಕೇಳಿದ್ದಾರೆ.   

ADVERTISEMENT

‘ಈ ಮೂಲಕ ಕೇಂದ್ರ ಸರ್ಕಾರವು, ಸತ್ಯಾನ್ವೇಷಣೆಗೆ ಮುಂದಾಗುವವರನ್ನು ಶಿಕ್ಷಿಸುವಂತಹ ಭಯದ ವಾತಾವರಣ ಸೃಷ್ಟಿಸುತ್ತಿದೆ. ಈಗಾಗಲೇ 2014ರಿಂದ ಇಲ್ಲಿಯವರೆಗೆ 100ಕ್ಕೂ ಹೆಚ್ಚು ಆರ್‌ಟಿಐ ಕಾರ್ಯಕರ್ತರ ಹತ್ಯೆಯಾಗಿದೆ’ ಎಂದು ಖರ್ಗೆ ಗಮನ ಸೆಳೆದಿದ್ದಾರೆ.  

‘ದೇಶದಲ್ಲಿ ಸಹಸ್ರಾರು ಆರ್‌ಟಿಐ ಪ್ರಕರಣಗಳು ಬಾಕಿ ಉಳಿದಿವೆ. ಹೀಗಿರುವಾಗ ಮಾಹಿತಿ ಆಯುಕ್ತರ ಅಧಿಕಾರಾವಧಿ ಮತ್ತು ವೇತನದ ಮೇಲೆ ನಿಯಂತ್ರಣ ಸಾಧಿಸಿ, ತನಗೆ ವಿಧೇಯರಾಗಿರುವಂತೆ ಕೇಂದ್ರ ಸರ್ಕಾರ ಮಾಡಿದೆ’ ಎಂದು ಅವರು ಟೀಕಿಸಿದ್ದಾರೆ.  

ಕೇಂದ್ರ ಮಾಹಿತಿ ಆಯೋಗ 2025ರ ಡಿಸೆಂಬರ್‌ನಿಂದ ಮುಖ್ಯ ಮಾಹಿತಿ ಆಯುಕ್ತರಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ. 11 ವರ್ಷಗಳಲ್ಲಿ ಏಳನೇ ಬಾರಿ ಉದ್ದೇಶಪೂರ್ವಕವಾಗಿ ಈ ಹುದ್ದೆಯನ್ನು ಖಾಲಿ ಬಿಡಲಾಗಿದೆ ಎಂದು ಅವರು ದೂರಿದ್ದಾರೆ. 

‘ಮಾಹಿತಿ ನಿರಾಕರಣೆ ಸರಿಯೇ?’:

‘ನಮ್ಮನ್ನು ನಾವು ಪ್ರಜಾಪ್ರಭುತ್ವದ ತಾಯಿ ಎಂದು ಕರೆದುಕೊಳ್ಳುತ್ತೇವೆ. ಆದರೆ ಜನರಿಗೆ ಮಾಹಿತಿ ನೀಡುವುದರಿಂದ ದೂರ ಸರಿಯುವುದು ಎಷ್ಟು ಸರಿ’ ಎಂದು ರಾಷ್ಟ್ರೀಯ ಮಾಹಿತಿ ಹಕ್ಕು ಅಭಿಯಾನದ ಜತೆ ಗುರುತಿಸಿಕೊಂಡಿರುವ ಅಂಜಲಿ ಭಾರದ್ವಾಜ್‌ ಪ್ರಶ್ನಿಸಿದ್ದಾರೆ.

ಸಂಸತ್ತಿನಲ್ಲಿ ಗುರುವಾರ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆಯಲ್ಲಿ ಆರ್‌ಟಿಐ ಕಾಯ್ದೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಲಾಗಿದೆ. ಈ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕಿದ್ದು, ಜಾಗತಿಕ ಮಟ್ಟದಲ್ಲಿನ ಅತ್ಯುತ್ತಮ ಅಭ್ಯಾಸಗಳನ್ನು ಸಂಯೋಜಿಸಬೇಕಿದೆ ಎಂದು ಸಮೀಕ್ಷೆ ಹೇಳಲಾಗಿದೆ. 

ಮಾಹಿತಿಯನ್ನು ತಡೆಹಿಡಿಯಲು ‘ಸಚಿವಾಲಯದ ವೀಟೊ’ ಅಧಿಕಾರವನ್ನು ಸಮೀಕ್ಷೆ ಸೂಚಿಸಿದೆ. ಸೇವಾ ದಾಖಲೆಗಳು, ವರ್ಗಾವಣೆ, ಸಿಬ್ಬಂದಿ ವರದಿಗಳನ್ನು ಸಾರ್ವಜನಿಕ ಪರಿಶೀಲನೆಯಿಂದ ರಕ್ಷಿಸಬೇಕಾದ ಅಗತ್ಯವಿದೆ ಎಂದೂ ಅದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.