ADVERTISEMENT

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಕಳೆದುಕೊಂಡ ಖರ್ಗೆ, ಆಜಾದ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 17:54 IST
Last Updated 11 ಸೆಪ್ಟೆಂಬರ್ 2020, 17:54 IST
   

ನವದೆಹಲಿ: ಕಾಂಗ್ರೆಸ್‌ ಪಕ್ಷದ ಕೇಂದ್ರ ಸಮಿತಿಯನ್ನು ಶುಕ್ರವಾರ ಪುನರ್‌ರಚಿಸಲಾಗಿದೆ. ಇತ್ತೀಚೆಗೆ ನಡೆದ ಸಮಿತಿಯ ಸಭೆಯಲ್ಲಿ ಪಕ್ಷದ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಂಡಾಯದ ಕಹಳೆ ಊದಿದ್ದ ಗುಲಾಂ ನಬಿ ಆಜಾದ್‌ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಗೊಳಿಸಲಾಗಿದೆ. ಅವರ ಸ್ಥಾನಕ್ಕೆ ವಿವೇಕ್‌ ಬನ್ಸಲ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಮಲ್ಲಿಕಾರ್ಜುನ ಖರ್ಗೆ, ಅಂಬಿಕಾ ಸೋನಿ ಹಾಗೂ ಮೋತಿಲಾಲ್‌ ವೋರಾ ಅವರೂ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಕಳೆದುಕೊಂಡಿ
ದ್ದಾರೆ. ಖರ್ಗೆ ಅವರು ಕಾರ್ಯಕಾರಿ ಸಮಿತಿಯಲ್ಲಿ ಮುಂದುವರಿಯಲಿದ್ದಾರೆ.

ರಾಹುಲ್‌ ಗಾಂಧಿ ಅವರಿಗೆ ನಿಷ್ಠರಾಗಿರುವ ರಣದೀಪ್‌ ಸುರ್ಜೇವಾಲ ಅವರನ್ನು ಕಾಂಗ್ರೆಸ್‌ ಅಧ್ಯಕ್ಷರಿಗೆ ಸಲಹೆ ನೀಡುವ ಸಲುವಾಗಿ ರೂಪಿಸಿರುವ ಆರು ಮಂದಿ ಸದಸ್ಯರ ಸಮಿತಿಗೆ ಸೇರಿಸಲಾಗಿದೆ. ಅವರು ಪಕ್ಷದ ಕರ್ನಾಟಕ ರಾಜ್ಯ ಉಸ್ತುವಾರಿಯೂ ಆಗಿರುತ್ತಾರೆ. ಆದರೆ ಸೋನಿಯಾ ಅವರಿಗೆ ಬರೆದಿದ್ದ ಪತ್ರಕ್ಕೆ ಸಹಿ ಮಾಡಿದವರಲ್ಲಿ ಒಬ್ಬರಾಗಿದ್ದ ಜಿತಿನ್‌ ಪ್ರಸಾದ‌ ಅವರಿಗೆ ಬಡ್ತಿ ನೀಡಿ ಪಶ್ಚಿಮ ಬಂಗಾಳ ಹಾಗೂ ಅಂಡಮಾನ್‌ ನಿಕೊಬಾರ್‌ ದ್ವೀಪದ ಉಸ್ತುವಾರಿ ನೀಡಲಾಗಿದೆ. ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶದ ಉಸ್ತುವಾರಿಯಾಗಿರುತ್ತಾರೆ.

ADVERTISEMENT

ಕಾರ್ಯಕಾರಿ ಸಮಿತಿಗೆ ದಿಗ್ವಿಜಯ್‌ ಸಿಂಗ್‌, ರಾಜೀವ್‌ ಶುಕ್ಲಾ, ಮಾಣಿಕಂ ಟ್ಯಾಗೋರ್‌, ಪ್ರಮೋದ್‌ ತಿವಾರಿ, ಜೈರಾಮ್‌ ರಮೇಶ್‌, ಎಚ್‌.ಕೆ. ಪಾಟೀಲ, ಸಲ್ಮಾನ್‌ ಖುರ್ಷೀದ್‌, ಪವನ್‌ ಬನ್ಸಲ್‌, ದಿನೇಶ್‌ ಗುಂಡುರಾವ್‌, ಮನೀಶ್‌ ಛತ್ರತ್‌ ಹಾಗೂ ಕುಲ್‌ಜೀತ್‌ ನಗರ್‌ ಅವರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.