ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ
–ಪಿಟಿಐ ಚಿತ್ರ
ಕೋಲ್ಕತ್ತ: ಸ್ಥಳೀಯ ಟಿಎಂಸಿ ನಾಯಕರ ವಿರುದ್ಧ ಪ್ರತಿಭಟನೆ ನಡೆಸಿದ್ದ ಸಂದೇಶ್‌ಖಾಲಿಯ ಮಹಿಳೆಯರನ್ನು ಸುಳ್ಳು ಪ್ರಕರಣಗಳ ಅಡಿಯಲ್ಲಿ ಬಂಧಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಚು ರೂಪಿಸಿದ್ದರು ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
ಮಮತಾ ಅವರು ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಗೆ ಸೋಮವಾರ ಭೇಟಿ ನೀಡಿದ್ದರು. ಸುವೇಂದು ಅವರು, ಅದೇ ಸ್ಥಳದಲ್ಲಿ ಮರುದಿನ ಸಾರ್ವಜನಿಕ ಸಮಾವೇಶ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಸುವೇಂದು, ಸಿಎಂ ಅವರನ್ನು ಹಾನಿಕಾರಕ ಕೃತ್ಯವೆಸಗುವ ಉದ್ದೇಶ ಹೊಂದಿರುವ ಮಹಿಳೆ ಎಂದು ದೂರಿದ್ದಾರೆ. ಇದೇ ವೇಳೆ ಅವರು, 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ, ಟಿಎಂಸಿ ನಾಯಕರ ದೌರ್ಜನ್ಯದ ಕುರಿತು ತನಿಖಾ ಆಯೋಗವನ್ನು ರಚಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ.
'2024ರ ಲೋಕಸಭೆ ಚುನಾವಣೆಗೂ ಮುನ್ನ ಸಂದೇಶ್‌ಖಾಲಿಯ ತಾಯಂದಿರು ಹಾಗೂ ಸಹೋದರಿಯರನ್ನು ಬಂಧಿಸುವುದಕ್ಕೆ ಮಮತಾ ಬ್ಯಾನರ್ಜಿ ಸಂಚು ರೂಪಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ, ಶಹಜಹಾನ್ ಶೇಖ್ ಅವರಂತಹ ಸ್ಥಳೀಯ ಟಿಎಂಸಿ ನಾಯಕರ ದಬ್ಬಾಳಿಕೆಗೆ ಕುಮ್ಮಕ್ಕು ನೀಡಿದಕ್ಕೆ ಮಮತಾ ಅವರು ಕ್ರಮ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ.
ಟಿಎಂಸಿ ನಾಯಕರ ವಿರುದ್ಧ ಕೇಳಿ ಬಂದಿದ್ದ ಭೂಕಬಳಿಕೆ ಹಾಗೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪಗಳು ಸಂದೇಶ್‌ಖಾಲಿಯಲ್ಲಿ 2024ರ ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದವು. ಈ ಸಂಬಂಧ ಭಾರಿ ಪ್ರತಿಭಟನೆಗಳು ನಡೆದು, ಹಿಂಸಾಚಾರವೂ ಆಗಿತ್ತು.
ಅದಾದ ಬಳಿಕ ಮೊದಲ ಸಲ ಸಂದೇಶ್‌ಖಾಲಿಗೆ ಸೋಮವಾರ ಭೇಟಿ ನೀಡಿದ್ದ ಮಮತಾ, 'ಟಿಎಂಸಿ ನಾಯಕ ಭೂಕಬಳಿಕೆ ಮಾಡಿದ್ದಾರೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ಸಂದೇಶ್‌ಖಾಲಿ ಭಾರಿ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು. ನಾನು ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ. ಇಲ್ಲಿನ ಯುವಕರು ಯಶಸ್ಸು ಸಾಧಿಸಬೇಕೆಂದು ನಾನು ಬಯಸುತ್ತೇನೆ. ಇದು ಗಲಭೆ ನಡೆಯುವ ಸ್ಥಳವಲ್ಲ. ನಾವು ಶಾಂತಿಯನ್ನು ಬಯಸುತ್ತೇವೆ, ವಿನಾಶವನ್ನಲ್ಲ' ಎಂದಿದ್ದರು.
ಹಾಗೆಯೇ, 'ರಾಜ್ಯ ಸರ್ಕಾರ ನೀಡುತ್ತಿರುವ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಯಾರಿಗೂ ಹಣ ಪಾವತಿಸಬೇಡಿ. ಯೋಜನೆಯ ಪ್ರಯೋಜನ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಸೇರುತ್ತದೆ. ನಿಮ್ಮ ಹಣ, ನಿಮ್ಮ ಹಕ್ಕು ಇದನ್ನು ನೆನಪಿಟ್ಟುಕೊಳ್ಳಿ' ಎಂದು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.