ನವದೆಹಲಿ: ಯಸ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಆಗಿರುವ ಹಾನಿಯ ಪರಿಶೀಲನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರುಹಾಜರಾಗಿದ್ದಾರೆ. ಬಿಜೆಪಿ ಮುಖಂಡರು ಮತ್ತು ರಾಜ್ಯಪಾಲರು ಮಮತಾ ಅವರ ನಡೆಯನ್ನು ಖಂಡಿಸಿದ್ದಾರೆ.
ಚಂಡಮಾರುತದಿಂದ ಆದ ಹಾನಿಯ ಪರಿಶೀಲನಾ ಸಭೆಗೆ ಹಾಜರಾಗುವ ಬದಲು, ಮಮತಾ ಅವರು ಮೋದಿ ಅವರನ್ನು ಕಲೈಕುಂದದಲ್ಲಿ ಭೇಟಿ ಮಾಡಿ, ₹ 20 ಸಾವಿರ ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
‘ಕಲೈಕುಂದದಲ್ಲಿ ಪ್ರಧಾನಿಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ. ದಿಘಾದಲ್ಲಿ ಬೇರೊಂದು ಸಭೆ ಆಯೋಜನೆಯಾಗಿದ್ದರೂ, ನಾನು ಮತ್ತು ಪ್ರಧಾನ ಕಾರ್ಯದರ್ಶಿ ಕಲೈಕುಂದಕ್ಕೆ ಹೋಗಿ, ಹಾನಿಯ ಬಗೆಗಿನ ವರದಿಯನ್ನು ಸಲ್ಲಿಸಿ ಬಂದಿದ್ದೇವೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮಮತಾ ತಿಳಿಸಿದ್ದಾರೆ.
‘ನೀವು ನನ್ನನ್ನು ಭೇಟಿಮಾಡಲು ಬಯಸಿದ್ದರಿಂದ ನಾನು ಇಲ್ಲಿಗೆ ಬಂದಿದ್ದೇನೆ. ಈ ವರದಿಯನ್ನು ತಮಗೆ ಸಲ್ಲಿಸುತ್ತಿದ್ದೇನೆ. ತಮಗೆ ಸೂಕ್ತವೆನಿಸಿದ ತೀರ್ಮಾನ ಕೈಗೊಳ್ಳಬಹುದು ಎಂದು ಪ್ರಧಾನಿಗೆ ಹೇಳಿದ್ದೇನೆ. ದಿಘಾದಲ್ಲಿ ಒಂದು ಸಭೆ ನಿಗದಿಯಾಗಿರುವುದರಿಂದ ಅಲ್ಲಿಗೆ ತೆರಳಬೇಕಾಗಿದೆ ಎಂದು ಅವರ ಅನುಮತಿ ಪಡೆದು ಬಂದಿದ್ದೇನೆ’ ಎಂದು ಮಮತಾ ಅವರು ಹೇಳಿದ್ದಾರೆ.
ಇನ್ನೊಂದೆಡೆ, ‘ಮಮತಾ ಅವರೇ ತಡವಾಗಿ ಬಂದು ಮೋದಿ ಹಾಗೂ ರಾಜ್ಯಪಾಲ ಜಗದೀಪ್ ಧನ್‌ಕರ್ ಅವರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯುವಂತೆ ಮಾಡಿದ್ದಾರೆ’ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಪ್ರಧಾನಿ ಮೋದಿ, ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಹಾಗೂ ಇತರರು ಮಮತಾ ಅವರಿಗಾಗಿ ಕಾಯುತ್ತಾ ಸಭೆಯಲ್ಲಿ ಕುಳಿತಿದ್ದ ಚಿತ್ರವನ್ನು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ಮಮತಾ ಅವರಿಗಾಗಿ ಕಾಯ್ದಿರಿಸಿದ್ದ ಕುರ್ಚಿ ಖಾಲಿ ಇರುವುದು ಕಾಣಿಸಿದೆ.
‘ಮಮತಾ ಅವರು ಪ್ರಧಾನಿಯನ್ನು ಬಹಿಷ್ಕರಿಸಿದ್ದಾರೆ’ ಎಂದು ಧನ್‌ಕರ್ ಅವರು ನೇರ ಆರೋಪ ಮಾಡಿದ್ದಾರೆ. ‘ಇಂಥ ಬಹಿಷ್ಕಾರವು ಸಂವಿಧಾನದ ಆಶಯ ಹಾಗೂ ಒಕ್ಕೂಟ ವ್ಯವಸ್ಥೆಗೆ ಪೂರಕವಲ್ಲ. ಇಂಥ ನಡೆಯಿಂದ ರಾಜ್ಯದ ಹಿತಾಸಕ್ತಿಯನ್ನಾಗಲಿ, ಜನರ ಹಿತಾಸಕ್ತಿಯನ್ನಾಗಲಿ ಕಾಪಾಡಲು ಸಾಧ್ಯವಾಗದು’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಮಮತಾ ಅವರ ಒಂದುಕಾಲದ ಸಮೀಪವರ್ತಿ, ಈಗ ವಿರೋಧಪಕ್ಷದ ನಾಯಕರಾಗಿರುವ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದೇ ಮಮತಾ ಅವರ ಈ ವರ್ತನೆಗೆ ಕಾರಣ ಎಂದು ಹೇಳಲಾಗಿದೆ.
ಪ್ರಧಾನಿಯ ಜತೆಗಿನ ಸಭೆಯ ವಿಚಾರದಲ್ಲಿ ಮಮತಾ ಅವರು ಒಂದು ವಾರದಲ್ಲಿ ಎರಡನೇ ವಿವಾದ ಸೃಷ್ಟಿಸಿದ್ದಾರೆ. ಕೋವಿಡ್ ತಡೆಗೆ ಸಂಬಂಧಿಸಿ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ನಡೆಸಿದ ಸಭೆಯಲ್ಲಿ ಮಮತಾ ಭಾಗಿಯಾಗಿದ್ದರು. ಆದರೆ, ಸಭೆ ಮುಕ್ತಾಯವಾದ ಕೂಡಲೇ ‘ಇದೊಂದು ಸೂಪರ್ ಫ್ಲಾಪ್ ಸಭೆ, ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ’ ಎಂದಿದ್ದರು.
‘ಒಕ್ಕೂಟ ವ್ಯವಸ್ಥೆಯ ಕಗ್ಗೊಲೆ’
ಮಮತಾ ಅವರ ಕ್ರಮವನ್ನು ಖಂಡಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ‘ಇದು ಸಂವಿಧಾನದ ಆಶಯಗಳು ಹಾಗೂ ಒಕ್ಕೂಟ ವ್ಯವಸ್ಥೆಯ ಕಗ್ಗೊಲೆ’ ಎಂದಿದ್ದಾರೆ.
‘ಒಕ್ಕೂಟ ವ್ಯವಸ್ಥೆಯನ್ನು ಪವಿತ್ರ ಎಂದು ಮೋದಿ ಅವರು ಗೌರವಿಸುತ್ತಾರೆ ಮತ್ತು ಜನರಿಗೆ ನೆರವು ಒದಗಿಸುವ ವಿಚಾರದಲ್ಲಿ ಪಕ್ಷಭೇದ ಮರೆತು ಎಲ್ಲಾ ಮುಖ್ಯಮಂತ್ರಿಗಳ ಜತೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾರೆ. ಆದರೆ ಮಮತಾ ಅವರ ತಂತ್ರಗಳು ಮತ್ತು ‘ಚಿಲ್ಲರೆ ರಾಜಕಾರಣ’ವು ಬಂಗಾಳದ ಜನರಿಗೆ ತೊಂದರೆ ಉಂಟುಮಾಡುತ್ತದೆ’ ಎಂದು ನಡ್ಡಾ ಶುಕ್ರವಾರ ಹೇಳಿದ್ದಾರೆ.
‘ತಾನು ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದೇನೆ ಎಂದು ಮಮತಾ ಪುನಃ ಸಾಬೀತುಮಾಡಿದ್ದಾರೆ. ಭಾರತದ ಒಕ್ಕೂಟ ವ್ಯವಸ್ಥೆಯ ಕರಾಳದಿನವಿದು. ಸ್ವತಂತ್ರ ಭಾರತದಲ್ಲಿ ಈವರೆಗೆ ಯಾವ ಮುಖ್ಯಮಂತ್ರಿಯೂ ಪ್ರಧಾನಿ ಮತ್ತು ರಾಜ್ಯಪಾಲರ ಜತೆ ಈ ರೀತಿ ಅಗೌರವ ಮತ್ತು ಅಹಂಕಾರದಿಂದ ವರ್ತಿಸಿದ್ದಿಲ್ಲ’ ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.