ADVERTISEMENT

ಕೋವಿಡ್ ಲಸಿಕೆ ವೇಗದ ವಿತರಣೆಗೆ ಕೇಂದ್ರದ ಜತೆ ಕೈಜೋಡಿಸಲು ಸಿದ್ಧ: ಮಮತಾ ಬ್ಯಾನರ್ಜಿ

ಏಜೆನ್ಸೀಸ್
Published 24 ನವೆಂಬರ್ 2020, 15:28 IST
Last Updated 24 ನವೆಂಬರ್ 2020, 15:28 IST
ಮಮತಾ ಬ್ಯಾನರ್ಜಿ (ಪಿಟಿಐ ಚಿತ್ರ)
ಮಮತಾ ಬ್ಯಾನರ್ಜಿ (ಪಿಟಿಐ ಚಿತ್ರ)   

ಕೋಲ್ಕತ್ತ: ಪ್ರತಿಯೊಬ್ಬರಿಗೂ ಆದಷ್ಟು ಬೇಗ ಲಸಿಕೆ ಒದಗಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಜತೆಗೂಡಿ ಕಾರ್ಯನಿರ್ವಹಿಸಲು ಪಶ್ಚಿಮ ಬಂಗಾಳ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಬೆನ್ನಲ್ಲೇ ಮಮತಾ ಅವರು ಈ ಹೇಳಿಕೆ ನೀಡಿದ್ದಾರೆ.

‘ಲಸಿಕೆ ಅಭಿವೃದ್ಧಿಗೆ ಸಂಬಂಧಿಸಿದ ಬೆಳವಣಿಗೆಗಳನ್ನು ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ. ದೇಶದಲ್ಲಿ ಲಸಿಕೆ ಅಭಿವೃದ್ಧಿಪಡಿಸುವವರು ಮತ್ತು ಉತ್ಪಾದಕರ ಜತೆ ಸಂಪರ್ಕದಲ್ಲಿದ್ದೇವೆ. ಜಾಗತಿಕ ನಿಯಂತ್ರಕರು, ಇತರ ದೇಶಗಳ ಸರ್ಕಾರಗಳು, ಬಹುರಾಷ್ಟ್ರೀಯ ಸಂಘಟನೆಗಳು, ಅಂತರರಾಷ್ಟ್ರೀಯ ಕಂಪನಿಗಳ ಜತೆಗೂ ಸಂಪರ್ಕದಲ್ಲಿದ್ದೇವೆ. ಒಂದು ಡೋಸ್ ನೀಡಬೇಕೇ ಅಥವಾ ಎರಡು ಅಥವಾ ಮೂರು ನೀಡಬೇಕೇ ಎಂಬುದು ಇನ್ನೂ ಖಚಿತವಾಗಿಲ್ಲ’ ಎಂದು ಮೋದಿ ಹೇಳಿದ್ದರು.

ಪಶ್ಚಿಮ ಬಂಗಾಳದಲ್ಲಿ ಸೋಮವಾರ 3,557 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 47 ಸಾವು ಸಂಭವಿಸಿತ್ತು. ರಾಜ್ಯದಲ್ಲಿ ಸದ್ಯ 25,030 ಸಕ್ರಿಯ ಪ್ರಕರಣಗಳಿವೆ.

ದೇಶದಲ್ಲಿ ಈವರೆಗೆ 91,77,841 ಮಂದಿ ಸೋಂಕಿತರಾಗಿದ್ದು, ಈ ಪೈಕಿ 86,04,955 ಮಂದಿ ಗುಣಮುಖರಾಗಿದ್ದಾರೆ ಹಾಗೂ 1,34,218 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ 4,38,667 ಸಕ್ರಿಯ ಪ್ರಕರಣಗಳಿವೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.