
ಮಹಬೂಬಾ ಮುಫ್ತಿ – ಮಮತಾ ಬ್ಯಾನರ್ಜಿ
ಶ್ರೀನಗರ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆಯೂ ಆಗಿರುವ ಮಮತಾ ಬ್ಯಾನರ್ಜಿ ಅವರನ್ನು ಪಿಡಿಪಿ ಅಧ್ಯಕ್ಷೆ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮಹಬೂಬಾ ಮುಫ್ತಿ ಅವರು ‘ಹೆಣ್ಣು ಹುಲಿ’ಗೆ ಹೋಲಿಸಿದ್ದಾರೆ.
ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಕಚೇರಿ ಮತ್ತು ಕೋಲ್ಕತ್ತದಲ್ಲಿರುವ ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಗುರುವಾರ ಜಾರಿ ನಿರ್ದೇಶನಾಲಯ ನಡೆಸಿದ ಶೋಧಕ್ಕೆ ಸಂಬಂಧಿಸಿದಂತೆ ಮುಫ್ತಿ ಪ್ರತಿಕ್ರಿಯಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ, ಟಿಎಂಸಿ ಪಕ್ಷದ ಸೂಕ್ಷ್ಮ ದತ್ತಾಂಶಗಳನ್ನು ವಶಪಡಿಸಿಕೊಳ್ಳಲು ಕೇಂದ್ರದ ತನಿಖಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಡಿ ಶೋಧ ನಡೆಸುತ್ತಿದ್ದ ಸ್ಥಳಕ್ಕೆ ಧಾವಿಸಿ ಬಂದ ಬಳಿಕ ಪ್ರಕರಣ ತಿರುವು ಪಡೆದುಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇಡಿ ಸೇರಿದಂತೆ ಕೇಂದ್ರದ ಇತರೆ ತನಿಖಾ ಸಂಸ್ಥೆಗಳು ನಡೆಸುತ್ತಿರುವ ದಾಳಿಗಳು ಸಾಮಾನ್ಯ ಎನ್ನುವಂತಾಗಿದ್ದವು. ಆದರೆ, ಈಗ ‘ಇಡೀ ದೇಶಕ್ಕೆ ಅದರ ರುಚಿ ತಿಳಿಯುತ್ತಿದೆ’ ಎಂದು ಮುಫ್ತಿ ಹೇಳಿದ್ದಾರೆ.
‘370ನೇ ವಿಧಿಯ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಮತ್ತು ಮೂವರು ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಿದಾಗಲೂ ಬಹುಪಾಲು ರಾಜಕೀಯ ಪಕ್ಷಗಳು ಮೌನವಾಗಿದ್ದವು. ಆದರೆ, ಈಗ ದೇಶದಾದ್ಯಂತ ಆ ಪ್ರಕ್ರಿಯೆ ಸಾಮಾನ್ಯವಾಗಿದೆ’ ಎಂದು ಅವರು ಹೇಳಿದರು.
370ನೇ ವಿಧಿಯ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ತಮ್ಮನ್ನೂ ಒಳಗೊಂಡಂತೆ, ಫಾರೂಕ್ ಅಬ್ದುಲ್ಲಾ ಹಾಗೂ ಒಮರ್ ಅಬ್ದುಲ್ಲಾ ಅವರನ್ನು ಬಂಧಿಸಿದ್ದ ಘಟನೆಯನ್ನು ಅವರು ಉಲ್ಲೇಖಿಸಿದರು.
‘ಆದರೆ, ಮಮತಾ ಬ್ಯಾನರ್ಜಿ ತುಂಬಾ ಧೈರ್ಯಶಾಲಿ, ‘ಹೆಣ್ಣು ಹುಲಿ’ ಮತ್ತು ಅವರು ಕೇಂದ್ರ ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಾರೆ. ಅವರು ಶರಣಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಪಿಡಿಪಿ ಮುಖ್ಯಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.