ADVERTISEMENT

ದುಷ್ಟ ಶಕ್ತಿ’ಗಳಿಗೆ ತಲೆಬಾಗುವುದಿಲ್ಲ: ಮಮತಾ ಬ್ಯಾನರ್ಜಿ

ಟಿಎಂಸಿ ಸಂಸ್ಥಾಪನಾ ದಿನ: ಮಮತಾ ಬ್ಯಾನರ್ಜಿ ಹೇಳಿಕೆ

ಪಿಟಿಐ
Published 1 ಜನವರಿ 2026, 15:23 IST
Last Updated 1 ಜನವರಿ 2026, 15:23 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ‘ತೃಣಮೂಲ ಕಾಂಗ್ರೆಸ್ ಪಕ್ಷವು ಜನರಿಗಾಗಿ ಹೋರಾಟ ನಡೆಸುವುದನ್ನು ಮುಂದುವರಿಸಲಿದ್ದು, ಯಾವುದೇ ‘ದುಷ್ಟ ಶಕ್ತಿ’ಗಳಿಗೆ ತಲೆಬಾಗದು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.

ಟಿಎಂಸಿ ಸಂಸ್ಥಾಪನಾ ದಿನದ ಅಂಗವಾಗಿ ಗುರುವಾರ ಕಾರ್ಯಕರ್ತರಿಗೆ ಶುಭಾಶಯ ಕೋರಿದ ಅವರು, ‘ಮಾತೃಭೂಮಿಯ ಮೇಲಿನ ಗೌರವ, ಬಂಗಾಳದ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ತೋರಿರುವ ಬದ್ಧತೆಯಿಂದಾಗಿ ಪಕ್ಷಕ್ಕೆ ಈ ಐತಿಹಾಸಿಕ ಪಯಣ ಸಾಧ್ಯವಾಗಿದೆ’ ಎಂದು ಪ‍್ರತಿ‍ಪಾದಿಸಿದರು.

‘ತಾಯಿ, ತಾಯ್ನೆಲ ಮತ್ತು ಜನರ ಸೇವೆ ಮಾಡುವ ಗುರಿಯೊಂದಿಗೆ ಪಕ್ಷವು 1998ರ ಜನವರಿ 1ರಂದು ತನ್ನ ಪಯಣ ಆರಂಭಿಸಿತು. ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಬೆಂಬಲಿಗರು ಈ ಗುರಿಯ ಈಡೇರಿಕೆಗೆ ಈಗಲೂ ಬದ್ಧರಾಗಿದ್ದಾರೆ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

‘ಅಸಂಖ್ಯಾತ ಜನರ ಪ್ರೀತಿ ಮತ್ತು ಆಶೀರ್ವಾದವು ಪಕ್ಷಕ್ಕೆ ಚೈತನ್ಯ ತುಂಬಿದೆ’ ಎಂದ ಅವರು, ದ್ವೇಷ ಕಾರುವವರನ್ನು ನಿರ್ಲಕ್ಷಿಸಿ, ದೇಶದ ಪ್ರತಿಯೊಬ್ಬ ಪ್ರಜೆಗಾಗಿ ಹೋರಾಟ ನಡೆಸುವುದನ್ನು ಟಿಎಂಸಿ ಮುಂದುವರಿಸಲಿದೆ ಎಂದರು.

ಪಶ್ಚಿಮ ಬಂಗಾಳದಲ್ಲಿ ಎಡರಂಗದ ಆಡಳಿತಕ್ಕೆ ಸವಾಲೆಸೆಯಲು ಮಮತಾ ಅವರು ಕಾಂಗ್ರೆಸ್‌ ತೊರೆದು 1998ರ ಜನವರಿ 1ರಂದು ಟಿಎಂಸಿ ಸ್ಥಾಪಿಸಿದ್ದರು. ಪಕ್ಷವು 2011ರಲ್ಲಿ ಅಧಿಕಾರಕ್ಕೇರಿತು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿಯಿರುವ ಹೊತ್ತಿನಲ್ಲಿ, ಟಿಎಂಸಿ ತನ್ನ 28ನೇ ವರ್ಷಕ್ಕೆ ಕಾಲಿಟ್ಟಿದೆ.

‘ಟಿಎಂಸಿಯು ತಾಯಿ, ತಾಯ್ನೆಲ ಮತ್ತು ಜನರ ಸೇವೆಗೆ ಬದ್ಧವಾಗಿರುವವರೆಗೆ ಯಾವುದೇ ಶಕ್ತಿಗೂ, ಅದು ಎಷ್ಟೇ ದುರಹಂಕಾರಿ ಅಥವಾ ದಬ್ಬಾಳಿಕೆಯಿಂದಲೂ ಕೂಡಿದ್ದರೂ ಬಂಗಾಳದ ಜನರ ದೃಢನಿಶ್ಚಯವನ್ನು ಸೋಲಿಸಲು ಸಾಧ್ಯವಿಲ್ಲ’ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಹೇಳಿದ್ದಾರೆ.

ತಳಮಟ್ಟದ ಕಾರ್ಯಕರ್ತರ ಶ್ರಮ ಅವರ ಶಿಸ್ತು ತ್ಯಾಗ ಹಾಗೂ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯಲ್ಲಿ ಟಿಎಂಸಿಯ ಶಕ್ತಿ ಅಡಗಿದೆ
ಅಭಿಷೇಕ್‌ ಬ್ಯಾನರ್ಜಿ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.