ADVERTISEMENT

ಕಲ್ಲಿದ್ದಲು ಹಗರಣ, ಜಾನುವಾರು ಕಳ್ಳಸಾಗಣೆಯಲ್ಲಿ ಮಮತಾ ಕುರುಡಾಗಿದ್ದಾರೆ: ಬಿಜೆಪಿ

ಪಿಟಿಐ
Published 4 ಏಪ್ರಿಲ್ 2021, 15:59 IST
Last Updated 4 ಏಪ್ರಿಲ್ 2021, 15:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಕಲ್ಲಿದ್ದಲು ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾಗಿರುವ ಇಬ್ಬರು ವ್ಯಕ್ತಿಗಳ ಸಂಭಾಷಣೆಗಳನ್ನು ಒಳಗೊಂಡ ಆಡಿಯೋ ಟೇಪ್ ಭಾನುವಾರ ಬೆಳಕಿಗೆ ಬಂದ ಕೆಲವೇ ಗಂಟೆಗಳ ನಂತರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಬಹುಕೋಟಿ ಹಗರಣಗಳನ್ನು ಕಂಡರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಆಡಳಿತ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸದಸ್ಯರೊಬ್ಬರು ಕಲ್ಲಿದ್ದಲು ಮಾಫಿಯಾ ಮತ್ತು ಜಾನುವಾರು ಕಳ್ಳಸಾಗಾಣಿಕೆದಾರರಿಂದ 900 ಕೋಟಿ ರೂ. ಪಡೆದಿದ್ದಾರೆ. ಈ ಪ್ರಕ್ರಿಯೆಯ ಒಂದು ಭಾಗವನ್ನು ಟಿಎಂಸಿಯ ಚುನಾವಣಾ ಪ್ರಚಾರವನ್ನು ಆಯೋಜಿಸಲು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.

ಮತ್ತೊಬ್ಬ ಬಿಜೆಪಿ ಮುಖಂಡ ದಿನೇಶ್ ತ್ರಿವೇದಿ ಮಾತನಾಡಿ, 'ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಲಾಗಿದೆ. ಮುಖ್ಯಮಂತ್ರಿ ಕಣ್ಮುಚ್ಚಿ ಕೂರಬಾರದು. ಅವರು ಮಹಾಭಾರತದ ಧೃತರಾಷ್ಟ್ರನಂತೆ ವರ್ತಿಸಲು ಸಾಧ್ಯವಿಲ್ಲ' ಎಂದು ಹೇಳಿದರು.

ADVERTISEMENT

ಸುವೇಂದು ಅಧಿಕಾರಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್ ಮಾತನಾಡಿ, 'ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ ಈಗಾಗಲೇ ಸೋಲು ಕಾಣುವುದನ್ನು ಕಂಡುಕೊಂಡಿರುವ ಬಿಜೆಪಿ ಸಂಯೋಜಿತ ಕಥೆಗಳನ್ನು ಹುಟ್ಟುಹಾಕಿ ಪ್ರಸಾರ ಮಾಡುತ್ತಿದೆ'. ಮಮತಾ ಬ್ಯಾನರ್ಜಿ ಮತ್ತು ಅವರ ಸಾಮಾಜಿಕ ಕಲ್ಯಾಣ ಯೋಜನೆಗಳ ಜನಪ್ರಿಯತೆಯು ಹೆಚ್ಚಿರುವ ಕಾರಣದಿಂದಾಗಿ ಕೇಸರಿ ಪಕ್ಷವು 'ವರ್ಚಸ್ಸಿಗೆ ಧಕ್ಕೆ' ತರುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

'ಮೂರನೇ ಹಂತದ ಚುನಾವಣೆಗಳು ಪ್ರಾರಂಭವಾಗುವುದಕ್ಕೆ 48 ಗಂಟೆಗಳಿಗಿಂತಲೂ ಕಡಿಮೆ ಸಮಯವಿರುವುದರಿಂದ, ಬಿಜೆಪಿ ತನ್ನ ಕಥಾವಸ್ತುವನ್ನು ಕಳೆದುಕೊಂಡಿದ್ದು, ಚುನಾವಣಾ ಲಾಭಕ್ಕಾಗಿ ಟಿಎಂಸಿ ವಿರುದ್ಧ ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಿದೆ' ಎಂದು ಘೋಷ್ ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಟಿಎಂಸಿ ಮುಖಂಡ ಮತ್ತು ಸಚಿವ ಸುಬ್ರತಾ ಮುಖರ್ಜಿ ಮಾತನಾಡಿ, ಕೇಸರಿ ಪಕ್ಷವು ತಾನು ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ನೀಡಲು ಸಾಧ್ಯವಾಗಿಲ್ಲ. ಮೂರನೇ ಹಂತದ ಚುನಾವಣೆಗೆ ಸ್ವಲ್ಪ ಮೊದಲು ಬಿಡುಗಡೆಯಾದ ಉದ್ದೇಶಿತ ಆಡಿಯೊ ಕ್ಲಿಪ್ ಮೋಸದಿಂದ ತಿದ್ದಿರುವಂತೆ ಕಂಡುಬರುತ್ತದೆ. ಇದು ರಾಜ್ಯದ ಆಡಳಿತ ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರುವ ತಂತ್ರವಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.