ADVERTISEMENT

ಆರ್ಥಿಕತೆ ಚೇತರಿಕೆಗೆ ಪ್ರಧಾನಿ ವಿಪಕ್ಷಗಳೊಂದಿಗೆ ಕೆಲಸ ಮಾಡಲಿ: ಮಮತಾ ಬ್ಯಾನರ್ಜಿ

ಏಜೆನ್ಸೀಸ್
Published 10 ಫೆಬ್ರುವರಿ 2020, 12:45 IST
Last Updated 10 ಫೆಬ್ರುವರಿ 2020, 12:45 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವು ರಾಜಕೀಯ ಹಗೆತನವನ್ನು ಬದಿಗಿಟ್ಟು ವಿರೋಧ ಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಬಜೆಟ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕತೆಯ ಪರಿಸ್ಥಿತಿಯನ್ನು ಸುಧಾರಿಸಲು ಪ್ರತಿಯೊಬ್ಬರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಅಗತ್ಯಬಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ವಿರೋಧ ಪಕ್ಷಗಳೊಂದಿಗೆ ಮಾತನಾಡಬೇಕು ಎಂದು ಒತ್ತಾಯಿಸಿದ್ದಾರೆ.

ಆರ್ಥಿಕತೆ ಕುರಿತಾಗಿ ಆರ್‌ಬಿಐ ನೀಡಿರುವ ಇತ್ತೀಚಿನ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು,ಆರ್‌ಬಿಐ ಏನನ್ನೇ ಹೇಳಿದ್ದರೂ ಕೂಡ ಅದು ಸೂಕ್ಷ್ಮ ವಿಚಾರ. ಆದರೆ ಕೇಂದ್ರ ಸರ್ಕಾರವು ದ್ವೇಷದ ರಾಜಕೀಯ ಮಾಡುವ ಬದಲು ಆರ್ಥಿಕತೆಯತ್ತ ಗಮನಹರಿಸಬೇಕು. ಪ್ರಧಾನಮಂತ್ರಿಯವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಗತ್ಯಬಿದ್ದರೆ ವಿರೋಧ ಪಕ್ಷಗಳೊಂದಿಗೂ ಚರ್ಚೆ ನಡೆಸಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸುತ್ತಿಲ್ಲ. ರಾಜ್ಯದಲ್ಲಿ ಇಂದು ಮಂಡನೆಯಾಗಿರುವ ಬಜೆಟ್‌ ಜನಪರವಾಗಿದ್ದು, ಜನರ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡೇ ಮಂಡಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.