ADVERTISEMENT

ಪಶ್ಚಿಮ ಬಂಗಾಳ | ಬೂತ್‌ ಅಧಿಕಾರಿ ಆತ್ಮಹತ್ಯೆ: ಎಸ್‌ಐಆರ್‌ ಒತ್ತಡದ ಆರೋಪ

ಪಿಟಿಐ
Published 20 ನವೆಂಬರ್ 2025, 0:50 IST
Last Updated 20 ನವೆಂಬರ್ 2025, 0:50 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಕೋಲ್ಕತ್ತ: ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ಬೂತ್‌ ಮಟ್ಟದ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕೆಲಸದ ಒತ್ತಡದಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ADVERTISEMENT

ಈ ವಿಚಾರವಾಗಿ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಿಡಿಕಾರಿದ್ದು, ತಕ್ಷಣವೇ ಎಸ್‌ಐಆರ್‌ ಪ್ರಕ್ರಿಯೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. 

ಮೃತರನ್ನು ಅಂಗನವಾಡಿ ಕಾರ್ಯಕರ್ತೆ ಶಾಂತಿಮುನಿ ಒರಾವ್ (48) ಎಂದು ಗುರುತಿಸಲಾಗಿದೆ. ರಂಗಮತಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೂತ್‌ ಸಂಖ್ಯೆ 20/101ರಲ್ಲಿ ಬೂತ್‌ ಅಧಿಕಾರಿಯಾಗಿದ್ದ ಅವರು, ತಮ್ಮ ಮನೆಯ ಬಳಿ ಇದ್ದ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಲಪೈಗುರಿ ಸದರ್‌ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಎಸ್‌ಐಆರ್‌ ಸಂಬಂಧಿಸಿದ ಕೆಲಸದ ಒತ್ತಡಗಳು ತೀವ್ರವಾಗಿವೆ ಎನ್ನುವ ಆರೋಪಗಳ ನಡುವೆಯೇ ಇತ್ತೀಚೆಗಷ್ಟೇ ಛಾಕ್‌ ಬಲರಾಮಪುರ ಬೂತ್‌ನ ಅಧಿಕಾರಿ ನಮಿತಾ ಹಂಸದಾ ಅವರು ಮಿದುಳಿನ ಪಾರ್ಶ್ವವಾಯು (ಬ್ರೈನ್‌ಸ್ಟ್ರೋಕ್‌) ಕಾರಣದಿಂದ ಮೃತಪಟ್ಟಿದ್ದರು. ಇದಾಗುತ್ತಿದ್ದಂತೆಯೇ ಶಾಂತಿಮುನಿ ಅವರ ಆತ್ಮಹತ್ಯೆ ಘಟನೆ ನಡೆದಿದೆ. 

 ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಕೇಳಿರುವುದಾಗಿ ಹೇಳಿದ್ದಾರೆ. 

ಚುನಾವಣಾ ಆಯೋಗವೇ ಹೊಣೆ: ಮಮತಾ 

ಭಾರತದ ಚುನಾವಣಾ ಆಯೋಗವು ಸರಿಯಾದ ಯೋಜನೆ ಇಲ್ಲದೇ ಕೆಲವು ರಾಜಕೀಯ ನಾಯಕರನ್ನು ಓಲೈಸಲು ನಡೆಸುತ್ತಿರುವ ಎಸ್‌ಐಆರ್‌ನಿಂದಾಗಿ ನಾವು ಮತ್ತೊಂದು ಅಮೂಲ್ಯ ಜೀವವನ್ನು ಕಳೆದುಕೊಂಡಿದ್ದೇವೆ. ಬೂತ್‌ ಮಟ್ಟದ ಅಧಿಕಾರಿಗಳ ಮೇಲೆ ಆಯೋಗ ಅಮಾನವೀಯ ಒತ್ತಡವನ್ನು ಹೇರುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.  ಶಾಂತಿಮುನಿ ಅವರ ಸಾವಿಗೆ ಸಂಬಂಧಿಸಿದಂತೆ ಎಕ್ಸ್‌ನಲ್ಲಿ ಮಮತಾ ಈ ರೀತಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೇ ‘ಹಿಂದೆಲ್ಲಾ 3 ವರ್ಷಗಳ ಕಾಲ ನಡೆಯುತ್ತಿದ್ದ ಕೆಲಸವನ್ನು ಈಗ 2 ತಿಂಗಳಲ್ಲಿ ಮಾಡಿ ಮುಗಿಸುವಂತೆ ಒತ್ತಡ ಹೇರಲಾಗುತ್ತಿದೆ. ಚುನಾವಣಾ ಆಯೋಗವು ಆತ್ಮಸಾಕ್ಷಿಯೊಂದಿಗೆ ಕಾರ್ಯನಿರ್ವಹಿಸಬೇಕು. ತಕ್ಷಣವೇ ಎಸ್‌ಐಆರ್‌ ಪ್ರಕ್ರಿಯೆ ನಿಲ್ಲಿಸಬೇಕು’ ಎಂದೂ ಮಮತಾ ಆಗ್ರಹಿಸಿದ್ದಾರೆ.  

ಇ.ಸಿ ಅಲ್ಲ ಟಿಎಂಸಿ ಒತ್ತಡ ಕಾರಣ

ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಗೂ ಶಿಕ್ಷಕರನ್ನು ಟಿಎಂಸಿ ಗೂಂಡಾಗಳು ಬೆದರಿಸುತ್ತಿದ್ದಾರೆ. ಮತದಾರರ ಪಟ್ಟಿಯ ಕೆಲಸ ಬೇಗ ಮುಗಿಸಿ ಇಲ್ಲವೇ ಕೆಲಸ ಕಳೆದುಕೊಳ್ಳುತ್ತೀರಿ ನಿಮ್ಮನ್ನು ವರ್ಗಾವಣೆ ಮಾಡುತ್ತೀವಿ ಎಂದೆಲ್ಲಾ ಬೆದರಿಕೆ ಹಾಕುತ್ತಿರುವುದಕ್ಕೇ ಈ ಘಟನೆಗಳು ನಡೆಯುತ್ತಿವೆ ಎಂದು ಬಿಜೆಪಿ ನಾಯಕ ಅಮಿತ್‌ ಮಾಳವೀಯ ಆರೋಪಿಸಿದ್ದಾರೆ.  ಬೂತ್‌ ಅಧಿಕಾರಿ ಸಾವಿಗೆ ಇ.ಸಿ.ಹೊಣೆ ಎಂದು ಮಮತಾ ಬ್ಯಾನರ್ಜಿ ಅವರು ಆರೋಪಿಸುತ್ತಿದ್ದಂತೆಯೇ ಮಾಳವೀಯಾ ಎಕ್ಸ್‌ನಲ್ಲಿ ಈ ಪೋಸ್ಟ್‌ ಮಾಡಿದ್ದಾರೆ.  ಅಲ್ಲದೇ ‘ಟಿಎಂಸಿ ಮತ ವಂಚಕ ಜಾಲದ ಒತ್ತಡದಿಂದಾಗಿ ಬೂತ್‌ ಅಧಿಕಾರಿಗಳು ಮೃತಪಡುತ್ತಿದ್ದಾರೆಯೇ ವಿನಃ ಚುನಾವಣಾ ಆಯೋಗದ ಒತ್ತಡದಿಂದಲ್ಲ.ಇದನ್ನು ಮರೆಮಾಚಲು ಮಮತಾ ಅವರು ವಿಷಕಾರಿ ವದಂತಿಯನ್ನು ಹಬ್ಬಿಸುತ್ತಿದ್ದಾರೆ’ ಎಂದೂ ದೂರಿದ್ದಾರೆ.

ಎಸ್‌ಐಆರ್‌ ಸಂಬಂಧಿತ ಮಾಹಿತಿ  ನಮೂದಿಸಲು ನೀಡಲಾಗುವ ಪತ್ರಗಳು ಬೆಂಗಾಲಿ ಭಾಷೆಯಲ್ಲಿ ಇದ್ದರೆ ಇಲ್ಲಿನ ಜನರು ಹಿಂದಿ ಭಾಷೆಯವರಾಗಿರುತ್ತಿದ್ದರು. ಮಾಹಿತಿ ದಾಖಲು ಮಾಡುವಾಗ ತಪ್ಪುಗಳು ಆಗುತ್ತಿದ್ದವು ಈ ಎಲ್ಲಾ ಒತ್ತಡ ನಿಭಾಯಿಸಲು ಶಾಂತಿಮುನಿಗೆ ಸಾಧ್ಯವಾಗಲಿಲ್ಲ.
– ಸುಖ್‌ ಎಕ್ಕಾ, ಶಾಂತಿಮುನಿ,ಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.