ADVERTISEMENT

ಪಶ್ಚಿಮ ಬಂಗಾಳ: ಸರ್ಕಾರಿ ವೈದ್ಯರ ವೇತನ ಹೆಚ್ಚಿಸಿ ಆದೇಶ ಹೊರಡಿಸಿದ ಸಿಎಂ ಮಮತಾ

ಪಿಟಿಐ
Published 24 ಫೆಬ್ರುವರಿ 2025, 15:17 IST
Last Updated 24 ಫೆಬ್ರುವರಿ 2025, 15:17 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

ಕೋಲ್ಕತ್ತ: ಪಶ್ಚಿಮ ಬಂಗಾಳದ ಸರ್ಕಾರಿ ವೈದ್ಯರ ವೇತನ ಹೆಚ್ಚಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಆದೇಶ ಹೊರಡಿಸಿದ್ದಾರೆ.

ಹಿರಿಯ ವೈದ್ಯರಿಗೆ ₹15 ಸಾವಿರ, ಇಂಟರ್ನಿಗಳು, ಉನ್ನತ ಶಿಕ್ಷಣ ಪಡೆದ ಟ್ರೈನಿಗಳು, ಇತರ ಸಿಬ್ಬಂದಿ, ಕಿರಿಯ ವೈದ್ಯರಿಗೆ ₹10 ಸಾವಿರ ವೇತನ ಹೆಚ್ಚಳ ಮಾಡುವುದಾಗಿ ಮಮತಾ ಘೋಷಿಸಿದ್ದಾರೆ.

ADVERTISEMENT

ಆರೋಗ್ಯ ಸಚಿವೆಯೂ ಆಗಿರುವ ಮಮತಾ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗಾಗಿ ಪ್ರತಿ ವೈದ್ಯಕೀಯ ಕಾಲೇಜಿಗೆ ₹2 ಕೋಟಿ ನೆರವು ಘೋಷಿಸಿದ್ದಾರೆ.

ವೈದ್ಯರೊಂದಿಗೆ ಮಾತನಾಡಿದ ಮಮತಾ, ‘ಹಿರಿಯ ವೈದ್ಯರು ಕಿರಿಯರಿಗೆ ಹಲವು ವಿಚಾರಗಳನ್ನು ಕಲಿಸುತ್ತಾರೆ. ಆದರೆ ಸಿ– ಸೆಕ್ಷನ್‌ ಅಥವಾ ಹೃದಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯ ಹೊರೆಯನ್ನು ಕಿರಿಯ ವೈದ್ಯರ ಮೇಲೆ ಪೂರ್ತಿಯಾಗಿ ಹೇರಬೇಡಿ. ಸರ್ಕಾರಿ ಆಸ್ಪತ್ರೆಗಳಿಗೆ ಕನಿಷ್ಠ ಎಂಟು ಗಂಟೆಗಳ ಕಾಲ ಸೇವೆ ನೀಡಿ, ಬಳಿಕ ಖಾಸಗಿ ಆಸ್ಪತ್ರೆಗಳಲ್ಲಿ ಅಭ್ಯಾಸ ಮುಂದುವರಿಸಿ. ಅದರಿಂದ ಯಾವ ಸಮಸ್ಯೆಯೂ ಇಲ್ಲ’ ಎಂದರು.

ಇದಲ್ಲದೆ ಸರ್ಕಾರಿ ವೈದ್ಯರು ತಮ್ಮ ಕೆಲಸದ ಸ್ಥಳದಿಂದ 20 ರಿಂದ 30 ಕಿ.ಮೀ ವ್ಯಾಪ್ತಿಯ ಒಳಗೆ ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಅಭ್ಯಾಸ ಮಾಡಬಹುದು ಎಂದರು.

ಇದೇ ವೇಳೆ ಆರ್‌ ಜಿ ಕರ್‌ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿ ಎಂದು ಒತ್ತಾಯಿಸಿದರು. ಪ್ರಕರಣದ ಆರೋಪಿ ಸಂಜಯ್‌ ರಾಯ್‌ಗೆ ಈಗಾಗಲೇ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೆ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರಕರಣ ಇನ್ನು ಬಾಕಿಯಿದೆ.

ಇದೇ ವೇಳೆ ಆರ್‌ ಜಿ ಕರ್‌ ಆಸ್ಪತ್ರೆಯ ಪ್ರಕರಣದಲ್ಲಿ ಅಮಾನತುಗೊಂಡ 12 ವೈದ್ಯರ ಅಮಾನತನ್ನು ರದ್ದುಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.