ADVERTISEMENT

ಪ್ರಧಾನಿ ಮೋದಿಯನ್ನು ಕೆಳಗಿಳಿಸಬೇಕು, ರೈತರು ಒಗ್ಗೂಡಬೇಕು: ಮಮತಾ ಬ್ಯಾನರ್ಜಿ

ಏಜೆನ್ಸೀಸ್
Published 9 ಜೂನ್ 2021, 17:33 IST
Last Updated 9 ಜೂನ್ 2021, 17:33 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ನಮ್ಮ ಮುಖ್ಯ ಗುರಿಯಾಗಬೇಕಿದೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ರೈತರನ್ನು ಒಗ್ಗೂಡಿಸುವುದಾಗಿ’ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ.

ರಾಕೇಶ್ ಟಿಕಾಯತ್‌ ಮತ್ತು ಯುಧ್‌ವೀರ್ ಸಿಂಗ್ ನೇತೃತ್ವದಲ್ಲಿ ರೈತ ಮುಖಂಡರೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದ್ದಾರೆ.

‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾನೂನುಗಳ ವಿರುದ್ಧ ಮತ್ತು ಕೃಷಿ ಬೆಳೆಗಳಿಗೆ ಖಾತರಿಪಡಿಸುವ ಕನಿಷ್ಠ ಬೆಂಬಲ ಬೆಲೆಯನ್ನು ತರುವ ರಾಷ್ಟ್ರವ್ಯಾಪಿ ಕಾನೂನಿನ ಪರವಾಗಿ ಬೆಂಬಲಿಸುವಂತೆ ರೈತ ಮುಖಂಡರು ಮಮತಾ ಬ್ಯಾನರ್ಜಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ADVERTISEMENT

‘ರೈತರ ಆಂದೋಲನಕ್ಕೆ ನಮ್ಮ ಬೆಂಬಲ ಇರುತ್ತದೆ’ ಎಂದು ಬ್ಯಾನರ್ಜಿ ಸಭೆಯ ನಂತರ ಘೋಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ವಿವಿಧ ರಾಜ್ಯಗಳ ರೈತರು ದೆಹಲಿ ಗಡಿಪ್ರದೇಶಗಳಲ್ಲಿ ಸತತ ಆರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿಯವರು ರೈತರ ಸಮಸ್ಯೆ ಆಲಿಸುವ ಕೆಲಸ ಮಾಡಲಿಲ್ಲ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಅವರೇ, ‘ರೈತರೊಂದಿಗೆ ಮಾತನಾಡಲು ಏಕೆ ಕಷ್ಟ?’ ಎಂದು ಬ್ಯಾನರ್ಜಿ ಪ್ರಶ್ನಸಿದ್ದಾರೆ.

‘ರೈತರ ಚಳುವಳಿ ಕೇವಲ ಪಂಜಾಬ್‌, ಹರಿಯಾಣ ಅಥವಾ ಉತ್ತರ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ಇಡೀ ದೇಶಕ್ಕೆ ಸಂಬಂಧಿಸಿದ್ದಾಗಿದೆ’ ಎಂದು ಮಮತಾ ಅಭಿಪ್ರಾಯಪಟ್ಟಿದ್ದಾರೆ.

ರೈತರ ವಿಚಾರದ ಬಗ್ಗೆ ಇತರ ರಾಜ್ಯಗಳ ನಾಯಕರೊಂದಿಗೆ ಮಾತನಾಡಲು ಮತ್ತು ರೈತ ಸಂಘಗಳೊಂದಿಗೆ ಸಂವಾದವನ್ನು ಆಯೋಜಿಸುವಂತೆ ಕೃಷಿ ಮುಖಂಡರಿಗೆ ಮಮತಾ ಬ್ಯಾನರ್ಜಿ ಸೂಚಿಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರೈತ ಮುಖಂಡ ರಾಕೇಶ್‌ ಟಿಕಾಯತ್‌ ಅವರು, ‘ಬಿಜೆಪಿ ಮತ ಚಲಾಯಿಸಬಾರದು’ ಎಂಬ ಆದೋಲನಕ್ಕೆ ಚಾಲನೆ ನೀಡಿದ್ದರು. ಈ ಮೂಲಕ ಟಿಎಂಸಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.