ADVERTISEMENT

₹ 25 ಕೋಟಿಗೆ ಪೆಗಾಸಸ್ ಕುತಂತ್ರಾಂಶ ಖರೀದಿ ಪ್ರಸ್ತಾಪ ಬಂದಿತ್ತು: ಮಮತಾ ಬ್ಯಾನರ್ಜಿ

ಪಿಟಿಐ
Published 17 ಮಾರ್ಚ್ 2022, 14:21 IST
Last Updated 17 ಮಾರ್ಚ್ 2022, 14:21 IST
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ವಿವಾದಿತ ಗೂಢಚರ್ಯೆ ಕುತಂತ್ರಾಂಶ ಪೆಗಾಸಸ್ ಖರೀದಿಸಲು ತಮ್ಮ ಸರ್ಕಾರದ ಮುಂದೆ ಪ್ರಸ್ತಾಪ ಬಂದಿತ್ತು ಎಂದು ಬುಧವಾರ ಹೇಳಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಗುರುವಾರ ಆ ಕುರಿತಂತೆ ಮತ್ತಷ್ಟು ವಿವರಗಳನ್ನು ಬಿಚ್ಚಿಟ್ಟಿದ್ದಾರೆ.

ಕೇವಲ ₹ 25 ಕೋಟಿಗೆ ಪೆಗಾಸಸ್ ಕುತಂತ್ರಾಂಶವನ್ನು ಮಾರುವುದಾಗಿ ನಾಲ್ಕೈದು ವರ್ಷಗಳ ಹಿಂದ ನಮ್ಮ ಪೊಲೀಸರ ಮುಂದೆ ಪ್ರಸ್ತಾಪ ಇಡಲಾಗಿತ್ತು. ಈ ಬಗ್ಗೆ ನನಗೆ ತಿಳಿದ ಕೂಡಲೇ ಅದನ್ನು ತಡೆದೆ ಎಂದು ಮಮತಾ ಹೇಳಿದ್ದಾರೆ.

ಈ ಮಧ್ಯೆ, ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಕುತಂತ್ರಾಂಶವನ್ನು ಖರೀದಿಸಿದ್ದರು ಎಂಬ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ತೆಲುಗು ದೇಶಂ ಪಕ್ಷ ತಳ್ಳಿಹಾಕಿದೆ.

ADVERTISEMENT

‘ಅವರು (ಪೆಗಾಸಸ್ ಕುತಂತ್ರಾಂಶ ಅಭಿವೃದ್ಧಿಪಡಿಸಿರುವ ಎನ್‌ಎಸ್ಒ ಸಂಸ್ಥೆ) ತಮ್ಮ ಕುತಂತ್ರಾಂಶವನ್ನು ಮಾರಾಟ ಮಾಡಲು ಪ್ರತಿಯೊಬ್ಬರ ಬಳಿಯೂ ಪ್ರಸ್ತಾಪ ಇಟ್ಟಿದ್ದಾರೆ. ಪೊಲೀಸರ ಬಳಿಯೂ ಕೇಳಿದ್ದಾರೆ. 4–5 ವರ್ಷಗಳ ಹಿಂದೆ ₹ 25 ಕೋಟಿಗೆ ಮಾರಲು ಬಂದಿದ್ದರು. ಆ ಬಗ್ಗೆ ಮಾಹಿತಿ ಬಂದ ಕೂಡಲೇ ನಮಗೆ ಅದು ಬೇಡವೆಂದು ತಿರಸ್ಕರಿಸಿದೆ’ಎಂದು ಮಮತಾ ಹೇಳಿದ್ದಾರೆ.

‘ಇದನ್ನು ದೇಶದ ಅನುಕೂಲ ಅಥವಾ ಭದ್ರತಾ ಕಾರಣಗಳಿಗೆ ಬಳಸಿದರೆ ಪರವಾಗಿಲ್ಲ. ಆದರೆ, ನ್ಯಾಯಾಧೀಶರು, ಅಧಿಕಾರಿಗಳ ಮೇಲೆ ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರವು ಬಳಸಿರುವುದು ಸ್ವಾಗತಾರ್ಹವಲ್ಲ’ ಎಂದು ಅವರು ಹೇಳಿದ್ದಾರೆ.

ನಮ್ಮ ಸರ್ಕಾರಕ್ಕೆ ಪೆಗಾಸಸ್ ಖರೀದಿಗೆ ಪ್ರಸ್ತಾಪ ಬಂದಿತ್ತು ಎಂಬ ಮಾಹಿತಿಯನ್ನು ಬುಧವಾರ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ಬಹಿರಂಗಪಡಿಸಿದ್ದರು.

ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಕಂಪನಿಯು ತಯಾರಿಸುತ್ತಿರುವ ಪೆಗಾಸಸ್‌ ಬೇಹುಗಾರಿಕೆ ತಂತ್ರಾಂಶ ಬಳಸಿ ಜಗತ್ತಿನಾದ್ಯಂತ 50 ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಬೇಹುಗಾರಿಕೆ ನಡೆಸಲಾಗಿದೆ. ಅದರಲ್ಲಿ ಭಾರತದ ವಿರೋಧ ಪಕ್ಷಗಳ ಮುಖಂಡರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಇದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪೆಗಾಸಸ್ ಬಳಸಿರುವ ಆರೋಪವೂ ಇದೆ.

ಇದನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.